ಕೊಚ್ಚಿ: ಮಲೆಯಾಳಂ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ಅಲಿಯಾಸ್ ಸುನಿಲ್ ಕುಮಾರ್ ಗೆ ಸಹಾಯ ಮಾಡಿದ ಆರೋಪದ ಮೇಲೆ ಎಆರ್ ಕ್ಯಾಂಪ್ ನ ಪೊಲೀಸ್ ಅಧಿಕಾರಿ ಎಆರ್ ಅನೀಶ್ ಅವರನ್ನು ಸೋಮವಾರ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಪಲ್ಸರ್ ಸುನಿ ಮತ್ತು ಸದ್ಯ ಜೈಲಿನಲ್ಲಿರುವ ಮಲೆಯಾಳಂ ನಟ ದಿಲೀಪ್ ಹಾಗೂ ಅವರ ಆಪ್ತ ಸರ್ಕಲ್ ಮಧ್ಯೆ ಸಂಪರ್ಕ ಬೆಳೆಯಲು ಅನೀಶ್ ಪ್ರಮುಕ ಪಾತ್ರ ವಹಿಸಿದ್ದ ಎಂದು ಈ ಹಿಂದೆ ವರದಿ ಮಾಡಲಾಗಿತ್ತು.
ನಿರ್ದೇಶಕ ಹಾಗೂ ದಿಲೀಪ್ ಸ್ನೇಹಿತ ನಾಧಿಶಾಹ್ ಅವರನ್ನು ಸಂಪರ್ಕಿಸಲು ಪಲ್ಸರ್ ಸುನಿಗೆ ಅನೀಶ್ ಸಹಾಯ ಮಾಡಿದ್ದಲ್ಲದೆ ಆರೋಪಿಗೆ ರಕ್ಷಣೆ ನೀಡಿದ್ದರು ಎಂದು ಮನೋರಮಾ ಆನ್ ಲೈನ್ ವರದಿ ಮಾಡಿತ್ತು.
ಅನೀಶ್ ಅವರನ್ನು ಮಲೆಯಾಳಂ ನಟಿ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 14ನೇ ಆರೋಪಿಯನ್ನಾಗಿ ಮಾಡಲಾಗಿದ್ದು, ಸೆಪ್ಟೆಂಬರ್ 9ರಂದು ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಎರ್ನಾಕುಲಂಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಪಲ್ಸರ್ ಸುನಿಯನ್ನು ಫೆ.23ರಂದು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಸುನಿಲ್ ಸೇರಿದಂತೆ ಇನ್ನಿತರೆ ಆರೋಪಿಗಳ ವಿರುದ್ಧ ಕೇರಳ ಪೊಲೀಸರು ಐಪಿಸಿ ಸೆಕ್ಸನ್ 342 (ಅಕ್ರಮ ಬಂಧನ), 366 (ಅಪಹರಣ ಅಥವಾ ಮಹಿಳೆಯ ಅಪಹರಣ), 376 (ಅತ್ಯಾಚಾರ, 506 (1) ಮತ್ತು 120 (ಬಿ) (ವಂಚನೆ)) ಅಡಿ ಕೇಸ್ ದಾಖಲಿಸಿಕೊಂಡಿದ್ದಾರೆ.