ನವದೆಹಲಿ: ಪಂಡಿತ್ ದೀನ ದಯಾಳ ಉಪಾಧ್ಯಾಯ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಕನ್ನಡದ ಕಂಪು

ಸೆ.25 ರಂದು ನವದೆಹಲಿಯಲ್ಲಿ ನಡೆದ ಪಂಡಿತ್ ದೀನ ದಯಾಳ ಉಪಾಧ್ಯಾಯ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕದ ಕಲಾ ತಂಡ ಪ್ರದರ್ಶನ ನೀಡಿದ್ದು, ದಕ್ಷಿಣ ಭಾರತದಿಂದ ಆಯ್ಕೆಯಾಗಿದ್ದ ಏಕೈಕ...
ನವದೆಹಲಿಯಲ್ಲಿ ಕರ್ನಾಟಕ ಕಲಾವಿದರ ತಂಡ
ನವದೆಹಲಿಯಲ್ಲಿ ಕರ್ನಾಟಕ ಕಲಾವಿದರ ತಂಡ
ನವದೆಹಲಿ: ಸೆ.25 ರಂದು ನವದೆಹಲಿಯ ಇಂದಿರಾಗಾಂಧಿ ಮೈದಾನದಲ್ಲಿ ನಡೆದ ಪಂಡಿತ್ ದೀನ ದಯಾಳ ಉಪಾಧ್ಯಾಯ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕದ ಕಲಾ ತಂಡ ಪ್ರದರ್ಶನ ನೀಡಿದ್ದು, ದಕ್ಷಿಣ ಭಾರತದಿಂದ ಆಯ್ಕೆಯಾಗಿದ್ದ ಏಕೈಕ ಕಲಾ ತಂಡವಾಗಿದೆ. 
ಪಂಡಿತ್ ದೀನ ದಯಾಳ ಉಪಾಧ್ಯಾಯ ಸಂಶೋಧನಾ ಸಂಸ್ಥೆ ಹಾಗೂ ಕೇಂದ್ರ ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಜನ್ಮಶತಮಾನೋತ್ಸವ ಕಾರ್ಯಕ್ರಮ "ಭಾರತ್ ಗೀತ್ ಮಾಲಾ" ದಲ್ಲಿ ಸಾಂಸ್ಕೃತಿಕ ರಾಯಭಾರಿ, ಗಾಯಕರಾದ ರಾಜೇಶ್ ಕೃಷ್ಣನ್,  ಶಶಿಕಲಾ, ಅತಿಶಯ್‌ ಜೈನ್‌, ರಾಜ್ಯ ಕಲಾ ತಂಡದ ನಿರ್ದೇಶನ, ನಿರ್ವಹಣೆ ವಹಿಸಿದ್ದ ಸ್ವಾತಿ ಚಂದ್ರಶೇಖರ್, ಪೂರ್ಣಿಮಾ, ನರಹರಿ ಹಾಡಿದ "ಈ ಮಣ್ಣು ನಮ್ಮದು... ಗೀತೆ ಹಾಗೂ ಕರ್ನಾಟಕದ ಯಕ್ಷಗಾನ, ಡೊಳ್ಳುಕುಣಿತ ಕಲಾವಿದರ ಪ್ರದರ್ಶನ, ಸ್ನೇಹ ಆಖಿರಾ ಸ್ಟುಡಿಯೋ ನೃತ್ಯ ತಂಡದ ಸಮಕಾಲೀನ ನೃತ್ಯ ಪ್ರದರ್ಶನ ದಕ್ಷಿಣ ಭಾರತದ ಸಂಸ್ಕೃತಿಯನ್ನು ಅನಾವರಣಗೊಳಿಸಿತ್ತು. ಮಹಿಳಾ ವೀರಗಾಸೆ ಕಾರ್ಯಕ್ರಮದ ವಿಶೇಷವಾಗಿತ್ತು. 
ಮೂರು ಪ್ರಾಚೀನ ಕಲೆಗಳನ್ನು ಪ್ರದರ್ಶಿಸಿದ ಕರ್ನಾಟಕದ ಕಲಾವಿದರಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದವರು ಎದ್ದು ನಿಂತು ಕರತಾಡನ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. 
ಕರ್ನಾಟಕದ ಕಲಾ ತಂಡಕ್ಕೆ ಸ್ವಾತಿ ಚಂದ್ರಶೇಖರ್ ನಿರ್ದೇಶನ, ನಿರ್ವಹಣೆ

ದೀನ ದಯಾಳ ಉಪಾಧ್ಯಾಯರ ಜನ್ಮಶತಮಾನೋತ್ಸವ ಕಾರ್ಯಕ್ರಮ "ಭಾರತ್ ಗೀತ್ ಮಾಲಾ" ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲಾತಂಡವನ್ನು ಕಲಾವಿದೆ, ಪತ್ರಕರ್ತೆ, TV5 ಸುದ್ದಿವಾಹಿನಿಯ ದೆಹಲಿ ಬ್ಯೂರೋ ಮುಖ್ಯಸ್ಥೆ ಸ್ವಾತಿ ಚಂದ್ರಶೇಖರ್ ನಿರ್ದೇಶಿಸಿ ನಿರ್ವಹಿಸಿದ್ದರು. 

ದಕ್ಷಿಣ ಭಾರತದಿಂದ ಆಯ್ಕೆಯಾಗಿದ್ದ ಕರ್ನಾಟಕ ಕಲಾವಿದರ ತಂಡದ ಯಕ್ಷಗಾನ, ಮಹಿಳಾ ವೀರಗಾಸೆ, ಡೋಳ್ಳು ಕುಣಿತ ಪ್ರದರ್ಶನ ದಕ್ಷಿಣ ಕನ್ನಡ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದ ಸಂಸ್ಕೃತಿಯನ್ನು ಪ್ರತಿನಿಧಿಸಿದ್ದು 13 ರಾಜ್ಯಗಳಿಂದ ಆಗಮಿಸಿದ್ದ ಕಲಾತಂಡಗಳಿಗಿಂತ ವಿಭಿನ್ನ ಪ್ರದರ್ಶನ ನೀಡಿ ನೆರೆದಿದ್ದ ಗಣ್ಯರು, ಕೇಂದ್ರ ಸಚಿವರುಗಳ ಗಮನ ಸೆಳೆದಿದ್ದು ವಿಶೇಷವಾಗಿತ್ತು.

ಕಲಾತಂಡವನ್ನು ನಿರ್ದೇಶಿಸಿ, ನಿರ್ವಹಿಸಿದ್ದ ಸ್ವಾತಿ ಚಂದ್ರಶೇಖರ್ ಕನ್ನಡಪ್ರಭ.ಕಾಂ ನೊಂದಿಗೆ ಮಾತನಾಡಿದ್ದು "ದೀನ ದಯಾಳ ಉಪಾಧ್ಯಾಯರ ಜನ್ಮಶತಮಾನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಕರ್ನಾಟಕದಿಂದ ಕಲಾವಿದರನ್ನು ಕರೆತರುವ ಜವಾಬ್ದಾರಿ ಹೆಗಲೇರಿತ್ತು. ಉಳಿದ ತಂಡಗಳಿಗಿಂತ ನಮ್ಮ ತಂಡದ ಪ್ರದರ್ಶನ ವಿಭಿನ್ನವಾಗಿರಲು 3 ಪ್ರಕಾರಗಳ ಸಾಂಸ್ಕೃತಿಕ ಕಲೆಯ ಪ್ರದರ್ಶಿಸಲು ಯೋಜನೆ ರೂಪಿಸಿದ್ದೆವು, ಇದಕ್ಕಾಗಿ ಸಾಕಷ್ಟು ತಯಾರಿ ನಡೆಸಲಾಗಿತ್ತು. ನಿರೀಕ್ಷೆಯಂತೆಯೇ ಕರ್ನಾಟಕದ ಕಲಾವಿದರ ತಂಡ 13 ರಾಜ್ಯಗಳಿಗಿಂತ ವಿಭಿನ್ನ, ವಿಶೇಷ ರೀತಿಯಲ್ಲಿ ತಂಡದ  ಪ್ರದರ್ಶನ ಮೂಡಿಬಂದಿದೆ". ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com