ಕೊಚ್ಚಿ: ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ಅಭಿನಯಿಸಿರುವ ಖ್ಯಾತ ಮಲೆಯಾಳಂ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಲೆಯಾಳಂ ಸೂಪರ್ ಸ್ಟಾರ್ ದಿಲೀಪ್ ಅವರು ನಟಿ ಅಪಹರಣಕ್ಕೆ ಮೂರು ಕೋಟಿ ರುಪಾಯಿ ಸುಪಾರಿ ನೀಡಿದ್ದರು ಎಂದು ಸರ್ಕಾರಿ ಅಭಿಯೋಜಕರು ಬುಧವಾರ ಕೇರಳ ಹೈಕೋರ್ಟ್ ಗೆ ತಿಳಿಸಿದ್ದಾರೆ.
ಐದನೇ ಬಾರಿ ಜಾಮೀನು ಕೋರಿ ಮಲೆಯಾಳಂ ನಟ ದಿಲೀಪ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ಸರ್ಕಾರಿ ಅಭಿಯೋಜಕರು ಈ ವಿಷಯ ತಿಳಿಸಿದ್ದು, ನಟಿಯನ್ನು ಅಪಹರಿಸಲು ಪ್ರಮುಖ ಆರೋಪಿ ಪಲ್ಸರ್ ಸುನಿಗೆ 1.50 ಕೋಟಿ ರುಪಾಯಿ ನೀಡುವುದಾಗಿ ಮತ್ತು ಒಂದು ವೇಳೆ ಅಪಹರಣದ ನಂತರ ಪೊಲೀಸರಿಗೆ ಸಿಕ್ಕರೆ ಡಬಲ್ ಹಣ ನೀಡವುದಾಗಿ ದಿಲೀಪ್ ಡೀಲ್ ಮಾಡಿದ್ದರು ಎಂದು ಕೋರ್ಟ್ ಗೆ ವಿವರಿಸಿದ್ದಾರೆ.
ಪ್ರಕರಣ ಸಂಬಂಧ ಕಳೆದ ಜುಲೈ 10ರಂದು ಬಂಧನಕ್ಕೊಳಗಾಗಿದ್ದ ನಟ ದಿಲೀಪ್ ಅವರು, ಇತ್ತೀಚಿಗಷ್ಟೇ ನಾಲ್ಕನೇ ಬಾರಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಂಗಮಲ್ಯ ಮ್ಯಾಜಿಸ್ಟ್ರೇಟ್ ಕೋರ್ಟ್ ವಜಾಗೊಳಿಸಿತ್ತು. ಆರೋಪಿ 60 ದಿನ ಜೈಲಿನಲ್ಲಿ ಕಳೆದಿದ್ದರೂ ಕಾನೂನು ಬದ್ಧ ಜಾಮೀನಿಗೆ ಅರ್ಹತೆ ಹೊಂದಿಲ್ಲ ಎಂದು ಹೇಳಿತ್ತು. ಈ ಹಿಂದೆ ಇದೇ ಕೋರ್ಟ್ ಮಲೆಯಾಳಂ ನಟನ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಅಲ್ಲದೆ ಕೇರಳ ಹೈಕೋರ್ಟ್ ಎರಡು ಬಾರಿ ದಿಲೀಪ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದು, ಈಗ ಮೂರನೇ ಬಾರಿ ಜಾಮೀನು ಅರ್ಜಿಯ ವಿಚಾರಣೆ ನಡೆಸುತ್ತಿದೆ.
ಎರ್ನಾಕುಲಂಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಮುಖ ಆರೋಪಿ ಪಲ್ಸರ್ ಸುನಿಯನ್ನು ಫೆ.23ರಂದು ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರಕರಣ ಸಂಬಂಧ ನಟ ದಿಲೀಪ್ ಅವರನ್ನು ಸಹ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಸುನಿಲ್ ಸೇರಿದಂತೆ ಇನ್ನಿತರೆ ಆರೋಪಿಗಳ ವಿರುದ್ಧ ಕೇರಳ ಪೊಲೀಸರು ಐಪಿಸಿ ಸೆಕ್ಸನ್ 342 (ಅಕ್ರಮ ಬಂಧನ), 366 (ಅಪಹರಣ ಅಥವಾ ಮಹಿಳೆಯ ಅಪಹರಣ), 376 (ಅತ್ಯಾಚಾರ, 506 (1) ಮತ್ತು 120 (ಬಿ) (ವಂಚನೆ)) ಅಡಿ ಕೇಸ್ ದಾಖಲಿಸಿಕೊಂಡಿದ್ದಾರೆ.