ಜೈಪುರ: ರಾಜಸ್ತಾನದ ಬಿಕನೇರ್ ಜಿಲ್ಲೆಯಲ್ಲಿ ದೆಹಲಿ ಮೂಲದ ಮಹಿಳೆ ಮೇಲೆ ಕನಿಷ್ಠ 23 ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ ಬರ್ಬರ ಘಟನೆ ನಡೆದಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬಿಕನೇರ್ ನಲ್ಲಿ ತಾವು ಖರೀದಿಸಿದ ಸೈಟು ನೋಡಿಕೊಂಡು ಹೋಗಲು ದೆಹಲಿಯಿಂದ ಮಹಿಳೆ ಬಂದಿದ್ದರು ಎಂದು ಹೇಳಲಾಗಿದೆ. ಸೈಟು ನೋಡಿಕೊಂಡು ದೆಹಲಿಗೆ ಕಾರು ಚಲಾಯಿಸಿಕೊಂಡು ಮಹಿಳೆ ಹಿಂತಿರುಗುತ್ತಿದ್ದ ವೇಳೆ ಇಬ್ಬರು ಕಾಮುಕರು ಡ್ರಾಪ್ ಕೇಳಿದರು.
ಅದಕ್ಕೆ ಮಹಿಳೆ ನಿರಾಕರಿಸಿದರು. ಆಗ ಮಹಿಳೆಯನ್ನು ಬಲಾತ್ಕಾರವಾಗಿ ಕಾರಿನೊಳಗೆ ಎಳೆದು ಗಂಟೆಗಟ್ಟಲೆ ಅತ್ಯಾಚಾರ ನಡೆಸಿದರು. ಆರೋಪಿಗಳು ಮತ್ತೆ 6 ಮಂದಿಯನ್ನು ಕರೆದು ಅವರು ಕೂಡ ಅತ್ಯಾಚಾರ ನಡೆಸಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ನಂತರ ಈ ಆರೋಪಿಗಳೆಲ್ಲ ಪಲಾನಾ ಎಂಬ ಹತ್ತಿರದ ಗ್ರಾಮಕ್ಕೆ ಕರೆದೊಯ್ದು ಅಲ್ಲಿ ಮತ್ತಷ್ಟು ಪುರುಷರು ಸೇರಿ ತಮ್ಮ ಮೇಲೆ ಅತ್ಯಾಚಾರ ನಡೆಸಿದರು ಎಂದು ಮಹಿಳೆ ದೂರು ನೀಡಿದ್ದಾರೆ. ಮಹಿಳೆಯನ್ನು ಮರುದಿನ ಅಂದರೆ ಮೊನ್ನೆ 26ರಂದು ಆಕೆಯನ್ನು ತಡೆದು ನಿಲ್ಲಿಸಿದ ಸ್ಥಳದಲ್ಲಿಯೇ ತಂದು ದುಷ್ಕರ್ಮಿಗಳು ಬಿಟ್ಟಿದ್ದಾರೆ.
ಪೊಲೀಸರು ಇಬ್ಬರು ಶಂಕಿತರು ಹಾಗೂ 21 ಅನಾಮಧೇಯ ವ್ಯಕ್ತಿಗಳ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.