ಶ್ರೀನಗರ: ಕಾಶ್ಮೀರದಲ್ಲಿ ಭಯೋತ್ಪಾದಕನಿಂದ ಅಪಹರಣಕ್ಕೊಳಗಾಗಿದ್ದ ಯುವಕನ ಶವ ಶಿರಚ್ಛೇದನಗೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬಂಡಿಪೋರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 25 ವರ್ಷದ ಯುವಕ ಮನ್ಜೋರ್ ಅಹ್ಮದ್ ಭಟ್ ಮೃತ ಯುವಕನಾಗಿದ್ದಾನೆ. ಪೊಲೀಸ್ ಇಲಾಖೆ ಮಾಹಿತಿ ಪ್ರಕಾರ ಲಷ್ಕರ್-ಎ-ತಯ್ಬಾ ಉಗ್ರ ಸಂಘಟನೆಯವರು ಯುವಕನನ್ನು ಹಾಗೂ ಆತನ ತಂದೆ ಅಬ್ದುಲ್ ಗಫಾರ್ ಭಟ್ ನ್ನು ಅಪಹರಣ ಮಾಡಿದ್ದರು.
ಭಯೋತ್ಪಾದಕರ ಗುಂಡೇಟಿಗೆ ಗುರಿಯಾದರೂ ಆ ಯುವಕನ ತಂದೆ ಉಗ್ರರಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದರು. ಉಗ್ರರಿಂದ ಪಾರಾಗಿದ್ದ ವ್ಯಕ್ತಿಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಈ ನಡುವೆ ಯುವಕನ ಶವ ಶಿರಚ್ಛೇದಗೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹಾಗೂ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಈ ಅಮಾನವೀಯ ಕೃತ್ಯವನ್ನು ಖಂಡಿಸಿದ್ದಾರೆ. ಪ್ರತ್ಯೇಕತಾವಾದಿಗಳು ಈ ಘಟನೆಯನ್ನು ಖಂಡಿಸಿ ಪ್ರತಿಭಟನೆಗೆ ಕರೆ ನೀಡದೇ ಇರುವುದು ನನಗೆ ಅಚ್ಚರಿ ಮೂಡಿಸಿಲ್ಲ ಎಂದು ಓಮರ್ ಅಬ್ದುಲ್ಲಾ ಹೇಳಿದ್ದಾರೆ.