ಪಿಎನ್ ಬಿ ವಂಚನೆ: ನೀರವ್ ಮೋದಿ, ಮೆಹುಲ್ ಚೋಕ್ಸಿಗೆ ಜಾಮೀನು ರಹಿತ ಬಂಧನ ವಾರಂಟ್

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಜ್ರದ ವ್ಯಾಪಾರಿ ನೀರವ್‌....
ನೀರವ್ ಮೋದಿ ಶೋರೂಂ
ನೀರವ್ ಮೋದಿ ಶೋರೂಂ
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಜ್ರದ ವ್ಯಾಪಾರಿ ನೀರವ್‌ ಮೋದಿ ಮತ್ತು ಅವರ ಅಂಕಲ್,  ಗೀತಾಂಜಲಿ ಜೆಮ್ಸ್ ನ ಮೆಹುಲ್ ಚೋಕ್ಸಿ ವಿರುದ್ಧ ಸಿಬಿಐ ವಿಶೇಷ ಕೋರ್ಟ್ ಬಂಧನ ವಾರಂಟ್ ಜಾರಿ ಮಾಡಿದೆ ಎಂದು ಭಾನುವಾರ ಅಧಿಕಾರಿಗಳು ತಿಳಿಸಿದ್ದಾರೆ.
ಬ್ಯಾಂಕಿಂಗ್ ಇತಿಹಾಸದಲ್ಲೇ ಅತಿ ದೊಡ್ಡ ವಂಚನೆ ಎಂದು ಪರಿಗಣಿಸಲಾಗಿರುವ ಪಿಎನ್ ಬಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್ ಮೋದಿಗೆ ಮತ್ತು ಮೆಹುಲ್ ಚೋಕ್ಸಿಗೆ ವಿಚಾರಣಗೆ ಹಾಜರಾಗುವಂತೆ ಹಲವು ಬಾರಿ ನೋಟಿಸ್ ನೀಡಿದರೂ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವ ಆರೋಪಿಗಳ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡುವಂತೆ ಸಿಬಿಐ ಮನವಿ ಮಾಡಿತ್ತು.
ಸಿಬಿಐ ಮನವಿಯನ್ನು ಪರಿಗಣಿಸಿ ವಿಶೇಷ ಕೋರ್ಟ್ ನೀರವ್ ಮೋದಿ, ಮೆಹುಲ್ ಚೋಕ್ಸಿ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸಿದ್ದು, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ವಿರುದ್ಧ ರೆಡ್ ಕಾರ್ನರ್ ನೋಟಿಸ್ ನೀಡಲು ಅವಕಾಶ ಮಾಡಿಕೊಟ್ಟಿದೆ.
ವಿಚಾರಣೆಗೆ ಹಾಜರಾಗುವಂತೆ ಮತ್ತು ತನಿಖೆಗೆ ಸಹಕರಿಸುವಂತೆ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಸಿಬಿಐ ಹಲವು ಬಾರಿ ಸಮನ್ಸ್ ಜಾರಿ ಮಾಡಿತ್ತು. ಆದರೆ ವ್ಯವಹಾರ ಮತ್ತು ಅನಾರೋಗ್ಯದ ನೆಪ ಹೇಳಿ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಸಿಬಿಐ ಕೋರ್ಟ್ ಗೆ ತಿಳಿಸಿದೆ.
ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಫೆಬ್ರವರಿ 19, 23, 28 ಮತ್ತು ಮಾರ್ಚ್ 8ರಂದು ಒಟ್ಟು ನಾಲ್ಕು ಬಾರಿ ಆದಷ್ಟು ಬೇಗ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸಮನ್ಸ್ ಜಾರಿ ಮಾಡಿತ್ತು. ಆದರೆ ಆರೋಪಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com