ಅತ್ಯಾಚಾರ ಆರೋಪಿ ಪರ ನಿಂತ ಕಾಶ್ಮೀರ ವಕೀಲರ ಸಂಘ: ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ಕಥುವಾ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯ ಪರ ನಿಂತಿರುವ ಕಥುವಾ, ಜಮ್ಮು ಮತ್ತು ಕಾಶ್ಮೀರ ವಕೀಲರ ಸಂಘ....
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ಕಥುವಾ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯ ಪರ ನಿಂತಿರುವ ಕಥುವಾ, ಜಮ್ಮು ಮತ್ತು ಕಾಶ್ಮೀರ ವಕೀಲರ ಸಂಘ ಮುಷ್ಕರಕ್ಕೆ ಕರೆ ನೀಡಿದ್ದ ಬಗ್ಗೆ ದಾಖಲೆ ನೀಡುವಂತೆ ಸುಪ್ರೀಂ ಕೋರ್ಟ್ ಕಾಶ್ಮೀರ ವಕೀಲರ ತಂಡಕ್ಕೆ ಶುಕ್ರವಾರ ಸೂಚಿಸಿದೆ.
ಕಾಶ್ಮೀರ ವಕೀಲರ ಸಂಘ ಆರೋಪಿಯ ರಕ್ಷಣೆಗೆ ನಿಂತಿದ್ದು, ಈ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುವಂತೆ ಕೋರಿ ಕಾಶ್ಮೀರ ವಕೀಲರ ತಂಡವೊಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಅವರು, ವಕೀಲರ ಸಂಘ ಆರೋಪಿಯ ರಕ್ಷಣೆಗೆ ನಿಂತಿರುವ ಬಗ್ಗೆ ಮತ್ತು ಪ್ರತಿಭಟನೆಗೆ ಕರೆ ನೀಡಿದ್ದ ಬಗ್ಗೆ ದಾಖಲೆ ನೀಡುವಂತೆ ವಕೀಲ ಪಿವಿ ದಿನೇಶ್ ಅವರಿಗೆ ಸೂಚಿಸಿದ್ದಾರೆ.
ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಆರೋಪಿಗಳ ಪರ ಸ್ಥಳೀಯ ವಕೀಲರ ಸಂಘ ನಿಂತಿರುವುದು ದುರದೃಷ್ಟಕರ ಎಂದು ದಿನೇಶ್ ಅವರು ಸುಪ್ರೀಂ ಕೋರ್ಟ್ ತಿಳಿಸಿದ್ದಾರೆ.
'ನೀವು ಕೆಲವು ದಾಖಲೆಗಳೊಂದಿಗೆ ಬನ್ನಿ, ನಿಮ್ಮ ಆರೋಪಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಯಾವುದೇ ದಾಖಲೆ ಇಲ್ಲ. ನಿಮ್ಮ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಿ ಸಲ್ಲಿಸಿದರೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗುವುದು' ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಅಲ್ಲದೆ ಪ್ರಕರಣದ ವಿಚಾರಣೆ ನಡೆಸುವುದಾಗಿ ಮುಖ್ಯ ನ್ಯಾಯಾಧೀಶರ ನೇತೃತ್ವದ ವಿಭಾಗೀಯ ಪೀಠ ತಿಳಿಸಿದೆ.
ರಾಜ್ಯ ಪೊಲೀಸ್‌ ಅಪರಾಧ ವಿಭಾಗದವರು ಸರಿಯಾಗಿ ತನಿಖೆ ಮಾಡುವುದಿಲ್ಲ ಎಂದು ಆರೋಪಿಸಿದ್ದ ವಕೀಲರ ಸಂಘ, ಪ್ರಕರಣದಲ್ಲಿ ಆರೋಪಿ ವಿರುದ್ಧ ಚಾರ್ಜ್‌ಶೀಟ್‌ ದಾಖಲಿಸುವುದನ್ನು ತಡೆದಿದ್ದರು ಎಂದು ಸಂತ್ರಸ್ಥ ಪರ ವಕೀಲರು ಆರೋಪಿಸಿದ್ದರು. 
ಕಳೆದ ಜನವರಿ 10ರಂದು ಎಂಟು ವರ್ಷದ ಬಾಲೆಯೊಬ್ಬಳನ್ನು ಅಪಹರಿಸಿ, ಅತ್ಯಾಚಾರ ಎಸಗಿ, ದೈಹಿಕವಾಗಿ ಹಿಂಸಿಸಿ, ಕೊಂದುಹಾಕಿದ ಘಟನೆ ಕಥುವಾ ಜಿಲ್ಲೆಯಲ್ಲಿ ನಡೆದಿತ್ತು. ಸಂತ್ರಸ್ಥೆಯು ಮುಸ್ಲಿಂ ಬುಡಕಟ್ಟು ಸಮುದಾಯಕ್ಕೆ ಸೇರಿದವಳು. ಬಾಲಕಿ ಕಾಣೆಯಾದ ಒಂದು ವಾರದ ಬಳಿಕ ಜನವರಿ 17ರಂದು ಆಕೆಯ ಶವ ಪತ್ತೆಯಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, 8 ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಸಾಕ್ಷ್ಯನಾಶ ಸಂಬಂಧ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು ಹಾಗೂ  ಹೆಡ್ ಕಾನ್ಸ್ ಟೇಬಲ್ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ ಈ ಪ್ರಕರಣದ ಕುರಿತು ಚಾರ್ಜ್‌ಶೀಟ್‌ ದಾಖಲಿಸದಂತೆ ತಡೆದ ವಕೀಲರ ವಿರುದ್ಧ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಕಳೆದ ಸೋಮವಾರ ಎಫ್‌ಐಆರ್‌ ದಾಖಲಿಕೊಂಡಿದ್ದಾರೆ.
ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಜಮ್ಮುವಿನ ವಕೀಲರ ಸಂಘವು ಬುಧವಾರ ಬಂದ್‌ ಕೂಡ ಆಚರಿಸಿತ್ತು. ಅಲ್ಲದೇ, ಪ್ರಕರಣದ ತನಿಖೆ ನಡೆಸುತ್ತಿರುವ ಅಪರಾಧ ವಿಭಾಗದ ಪೊಲೀಸರ ವಿಶೇಷ ತಂಡದ ವಿಶ್ವಾಸಾರ್ಹತೆ ಮೇಲೂ ಅನುಮಾನ ವ್ಯಕ್ತಪಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com