ನವದೆಹಲಿ: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್ ಯು)ದ ಮತ್ತೊಬ್ಬ ಪ್ರೊಫೆಸರ್ ವಿರುದ್ಧ ದೆಹಲಿ ಪೊಲೀಸರು ಶುಕ್ರವಾರ ಕೇಸ್ ದಾಖಲಿಸಿದ್ದಾರೆ.
ವಿವಿಯ ಸಮಾಜ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಅಜಯ್ ಕುಮಾರ್ ಅವರ ವಿರುದ್ಧ ದೆಹಲಿ ಪೊಲೀಸರು ನಿನ್ನೆ ಎಫ್ಐಆರ್ ದಾಖಲಿಸಿದ್ದಾರೆ.
ಎರಡು ದಿನಗಳ ಹಿಂದೆ ಪ್ರಾಧ್ಯಾಪಕ ಅಜಯ್ ಕುಮಾರ್ ಅವರು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿಯೊಬ್ಬರು ವಸಂತ್ ಕುಂಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜೆಎನ್ ಯು ಪ್ರಾಧ್ಯಾಪಕರ ವಿರುದ್ಧ ಐಪಿಸಿ ಸೆಕ್ಷನ್ 354ರಡಿ ಕೇಸ್ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಐಎಎನ್ ಎಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಈ ಮಧ್ಯೆ, ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಯಾವುದೇ ವಿದ್ಯಾರ್ಥಿ ತನಗೆ ದೂರು ನೀಡಿಲ್ಲ ಎಂದು ವಿವಿ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಕಳೆದ ಒಂದು ತಿಂಗಳಲ್ಲಿ ವಿವಿಧ ಪ್ರಾಧ್ಯಾಪಕರ ವಿರುದ್ಧ ದಾಖಲಾಗಿರುವ ಮೂರನೇ ಲೈಂಗಿಕ ಕಿರುಕುಳ ಪ್ರಕರಣ ಇದಾಗಿದ್ದು, ಎರಡು ವಿಭಿನ್ನ ಪ್ರಕರಣಗಳಲ್ಲಿ ನಾಲ್ವರು ಪ್ರೊಫೆಸರ್ ವಿರುದ್ಧ ಕೇಸ್ ದಾಖಲಿಸಲಾಗಿದೆ.