ಸಿಖ್‌ ಯಾತ್ರಿಕರು ಭಾರತೀಯ ರಾಯಭಾರಿ ಭೇಟಿಗೆ ಪಾಕ್‌ ತಡೆ: ಪ್ರತಿಭಟನೆ ದಾಖಲಿಸಿದ ಭಾರತ

ಪಾಕಿಸ್ತಾನದಲ್ಲಿ ಸಿಖ್‌ ಯಾತ್ರಿಕರಿಗೆ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳು ಮತ್ತು ರಾಯಭಾರ ಕಚೇರಿ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಪಾಕಿಸ್ತಾನದಲ್ಲಿ ಸಿಖ್‌ ಯಾತ್ರಿಕರಿಗೆ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳು ಮತ್ತು ರಾಯಭಾರ ಕಚೇರಿ ಜತೆ ಸಂಪರ್ಕ ಸಾಧಿಸಲು ತಡೆಯೊಡ್ಡಿರುವ ಪಾಕ್‌ ಕ್ರಮವನ್ನು ಭಾರತ ತೀವ್ರವಾಗಿ ಖಂಡಿಸಿದೆ.
ಪಾಕಿಸ್ತಾನ ಪ್ರವಾಸದಲ್ಲಿ ಸುಮಾರು 1800 ಸಿಖ್ ಯಾತ್ರಿಕರಿಗೆ ಭಾರತೀಯ ಹೈಕಮಿಷನ್ ಅಥವಾ ಶಿಷ್ಟಾಚಾರ ತಂಡದ ಜತೆ ಸಂಪರ್ಕ ಏರ್ಪಡಿಸುವುದು ಎಲ್ಲೆಡೆ ಚಾಲ್ತಿಯಲ್ಲಿರುವ ನಿಯಮ. ಅವರಿಗೆ ಅಗತ್ಯವಿರುವ ವೈದ್ಯಕೀಯ ಅಥವಾ ಕೌಟುಂಬಿಕ ಸಹಾಯ ಒದಗಿಸುವುದು ದೂತಾವಾಸದ ಕರ್ತವ್ಯವೂ ಆಗಿರುತ್ತದೆ. ಹಾಗಿದ್ದರೂ ಈ ವರ್ಷ ಸಿಖ್‌ ಯಾತ್ರಿಕರಿಗೆ ಭಾರತೀಯ ರಾಯಭಾರ ಕಚೇರಿಯ ಸಂಪರ್ಕದ ಅವಕಾಶವನ್ನು ಪಾಕ್ ನಿರಾಕರಿಸಿದೆ ಎಂದು ವಿದೇಶಾಂಗ ಸಚಿವಾಲಯ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.
ಏಪ್ರಿಲ್ 12ರಿಂದ ರಾವಲ್ಪಿಂಡಿಯ ಗುರುದ್ವಾರ ಪಂಜಾ ಸಾಹಿಬ್ ನಲ್ಲಿ ಬೈಸಾಖಿ ಹಬ್ಬದ ಆಚರಣೆಗಾಗಿ ಸಿಖ್‌ ಯಾತ್ರಿಕರು ಪಾಕಿಸ್ತಾನಕ್ಕೆ ತೆರಳಿದ್ದರು. ಭಾರತೀಯ ಪ್ರಜೆಗಳಿಗೆ ಭಾರತೀಯ ಹೈಕಮಿಷನ್‌ ನೀಡಬಹುದಾದ ಪ್ರಾಥಮಿಕ ಸಹಾಯಗಳನ್ನು ಒದಗಿಸುವುದಕ್ಕೆ ಪಾಕ್‌ ಅಧಿಕಾರಿಗಳು ಅಡ್ಡಿಯುಂಟು ಮಾಡಿದ್ದಾರೆ.
ಯಾತ್ರಿಕರ ತಂಡ ಏಪ್ರಿಲ್ 12ರಂದು ವಾಘಾ ಗಡಿಗೆ ಬಂದಾಗ ಭಾರತೀಯ ಹೈಕಮಿಷನ್‌ ಅಧಿಕಾರಿಗಳ ತಂಡ ಅವರನ್ನು ಸ್ವಾಗತಿಸಲು ಸಾಧ್ಯವಾಗಿಲ್ಲ. ಅದೇ ರೀತಿ ಏಪ್ರಿಲ್ 14ರಂದು ಗುರುದ್ವಾರ ಪಂಜಾ ಸಾಹಿಬ್‌ನಲ್ಲೂ ಯಾತ್ರಿಕರ ಭೇಟಿಗೆ ಅವಕಾಶ ನೀಡಿಲ್ಲ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ರಾಜತಾಂತ್ರಿಕ ಸೌಜನ್ಯತೆಗೆ ಅಡ್ಡಿಯುಂಟುಮಾಡಿದ ಪಾಕ್ ಕ್ರಮ 1961ರ ವಿಯೆನ್ನಾ ಒಪ್ಪಂದ, ಧಾರ್ಮಿಕ ಸ್ಥಳಗಳನ್ನು ಸಂದರ್ಶಿಸುವ 1974ರ ದ್ವಿಪಕ್ಷೀಯ ಒಪ್ಪಂದ ಹಾಗೂ ರಾಜತಾಂತ್ರಿಕ ನೀತಿ ಸಂಹಿತೆಗಳ ಉಲ್ಲಂಘನೆಯಾಗಿದೆ ಎಂದು ಭಾರತ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com