
ನವದೆಹಲಿ: ಇಂದ್ರಾಣಿ ಮುಖರ್ಜಿಯವರ ಸಲಹೆ ಮೇರೆಗೆ ಶೀನಾ ಬೋರಾಳ ಸಹಿಯನ್ನು ನಕಲು ಮಾಡುತ್ತಿದ್ದೆ ಎಂದು ಇಂದ್ರಾಣಿ ಮುಖರ್ಜಿಯವರ ಖಾಸಗಿ ಸಹಾಯಕಿ ಕಾಜಲ್ ಶರ್ಮಾ ವಿಶೇಷ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.
ತನ್ನ ಮಗಳು ಅಮೆರಿಕಾದಲ್ಲಿದ್ದು ಅಲ್ಲಿ ರಾಜಿನಾಮೆ ಸಲ್ಲಿಸಲು ಇಂಟರ್ನೆಟ್ ಸಂಪರ್ಕವಿಲ್ಲದ ಕಾರಣ ರಾಜಿನಾಮೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಇಂದ್ರಾಣಿ ಮುಖರ್ಜಿ ಹೇಳಿದ ನಂತರ ನಾನು ಶೀನಾಳ ಸಹಿಯನ್ನು ನಕಲಿ ಮಾಡಿ ಆಕೆಯ ಹೆಸರಲ್ಲಿ ರಾಜಿನಾಮೆ ಪತ್ರ ಸಲ್ಲಿಸಿದ್ದೆ ಎಂದಿದ್ದಾರೆ.
ಶೀನಾಳ ರಾಜಿನಾಮೆಗೆ ಇಂದ್ರಾಣಿ ಮತ್ತು ಕಾಜಲ್ ನಡುವೆ ನಡೆದ ಮೇಲ್ ವ್ಯವಹಾರದ ದಿನಾಂಕವನ್ನು ಕೂಡ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು ಅದು ದಾಖಲೆಗಳ ಪ್ರಕಾರ ಕೊಲೆಯಾದ ದಿನಾಂಕದ ನಂತರದ ದಿನಾಂಕವಾಗಿದೆ.
ಶೀನಾ ಬೋರ ಕೊಲೆ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯ, ವಿಚಾರಣೆ ಸಂದರ್ಭದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಗೆ ಸಹಾಯ ಮಾಡಲು ನ್ಯಾಯಾಲಯದಲ್ಲಿ ಹಾಜರಿರುವಂತೆ ತನಿಖಾಧಿಕಾರಿಗೆ ಅನುಮತಿ ನೀಡಿದೆ.
ಶೀನಾ ಬೋರಾ ಹತ್ಯೆಯ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಮುಂಬೈಯ ಬೈಸುಲ್ಲಾ ಜೈಲಿನಲ್ಲಿ ಬಂಧಿಯಾಗಿದ್ದಾಳೆ.
2012ರ ಏಪ್ರಿಲ್ 24ರಂದು 24 ವರ್ಷದ ಶೀನಾ ಬೋರಾಳನ್ನು ಅಪಹರಿಸಿ ಹಣಕಾಸಿನ ವಿವಾದಕ್ಕೆ ಸಂಬಂಧಪಟ್ಟಂತೆ ಹತ್ಯೆ ಮಾಡಲಾಗಿತ್ತು. ನಂತರ ಶವವನ್ನು ರಾಯ್ ಗಾಢ್ ಜಿಲ್ಲೆಯ ಅರಣ್ಯವೊಂದರಲ್ಲಿ ಎಸೆಯಲಾಗಿತ್ತು.
ಈ ಪ್ರಕರಣ ಸಂಬಂಧ 2015ರ ಆಗಸ್ಟ್ ನಲ್ಲಿ ಇಂದ್ರಾಣಿ ಮತ್ತು ಆಕೆಯ ಮಾಜಿ ಪತಿ ಸಂಜೀವ್ ಖನ್ನಾರನ್ನು ಬಂಧಿಸಲಾಯಿತು. ಅವರ ಜೊತೆ ಕಾರಿನ ಮಾಜಿ ಚಾಲಕ ಶ್ಯಾಮ್ ವರ್ ರೈ ಮತ್ತು ಇಂದ್ರಾಣಿಯ ಈಗಿನ ಪತಿ ಪೀಟರ್ ಮುಖರ್ಜಿಯನ್ನು ಅದೇ ವರ್ಷ ನವೆಂಬರ್ ನಲ್ಲಿ ಬಂಧಿಸಲಾಯಿತು.
Advertisement