ಜೋಧ್ ಪುರ: ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ವಿರುದ್ಧದ ಅತ್ಯಾಚಾರ ಪ್ರಕರಣದ ಅಂತಿಮ ತೀರ್ಪು ಬುಧವಾರ ಪ್ರಕಟವಾಗುತ್ತಿದೆ.
ತೀರ್ಪು ಹಿನ್ನೆಲೆಯಲ್ಲಿ ರಾಜಸ್ತಾನ, ಗುಜರಾತ್ ಮತ್ತು ಹರಿಯಾಣದಲ್ಲಿ ಬಿಗಿ ಭದ್ರತೆ ಏರ್ಪಡಿಸಿ, ಹೆಚ್ಚುವರಿ ಪಡೆ ನಿಯೋಜಿಸಲು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಮೂರೂ ರಾಜ್ಯಗಳಿಗೆ ಸೂಚನೆ ನೀಡಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯಂತೆ ಸೂಕ್ತ ಭದ್ರತೆ ಕೈಗೊಳ್ಳುವಂತೆ ಹೇಳಿದೆ.
ಇನ್ನು ತೀರ್ಪು ಪ್ರಕಟಿಸುವ ಜೋಧ್ ಪುರ ಸೆಂಟ್ರಲ್ ಜೈಲು ಪ್ರವೇಶಕ್ಕೆ ಅನುಮತಿ ಕೋರಿ ಮಾಧ್ಯಮದವರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ನಾಳೆ ಬೆಳಗ್ಗೆ ಆರೋಪಿ ಇರುವ ಜೋಧ್ ಪುರ್ ಸೆಂಟ್ರಲ್ ಜೈಲಿನಲ್ಲಿಯೇ ಎಸ್ಸಿ, ಎಸ್ಟಿ ವಿಶೇಷ ಕೋರ್ಟ್ ನ್ಯಾಯಾಧೀಶ ಮಧುಸುದನ್ ಶರ್ಮಾ ಅವರು ಅಸಾರಾಂ ಬಾಪು ವಿರುದ್ಧದ ಅತ್ಯಾಚಾರ ಪ್ರಕರಣದ ತೀರ್ಪು ಪ್ರಕಟಿಸಲಿದ್ದಾರೆ.
ರಾಜಸ್ತಾನ, ಗುಜರಾತ್ ಮತ್ತು ಹರಿಯಾಣಗಳಲ್ಲಿ ಅಸಾರಾಮ್ ಬಾಪು ಅವರ ಅನುಯಾಯಿಗಳು ಅಧಿಕ ಸಂಖ್ಯೆಯಲ್ಲಿದ್ದು, ಮೂರು ರಾಜ್ಯಗಳ ಆಯಕಟ್ಟು ಪ್ರದೇಶಗಳಿಗೆ ಈಗಾಗಲೇ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಆಶ್ರಮದಲ್ಲಿ ಅಸಾರಾಂ ಬಾಪು ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿ 16 ವರ್ಷದ ವಿದ್ಯಾರ್ಥಿನಿ ಸ್ವಯಂ ಘೋಷಿತ ದೇವಮಾನವನ ವಿರುದ್ಧ ಕೇಸ್ ದಾಖಲಿಸಿದ್ದಳು.
ಈ ಪ್ರಕರಣ ಸಂಬಂಧ ಜೋಧಪುರ ಪೊಲೀಸರು ಅಸಾರಾಂನ 2013ರ ಆಗಸ್ಟ್ 31ರಂದು ಬಂಧಿಸಿದ್ದು, ಅಂದಿನಿಂದಲೂ ಅವರು ಜೈಲಿನಲ್ಲಿದ್ದಾರೆ.
ಅಸಾರಾಂ ಬಾಪು ವಿರುದ್ಧದ ಅತ್ಯಾಚಾರ ಆರೋಪ ಸಾಬೀತಾದರೆ ಗರಿಷ್ಠ 10 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.