ಐತಿಹಾಸಿಕ 'ಕೆಂಪುಕೋಟೆ'ಯನ್ನು ಮೋದಿ ಸರ್ಕಾರ ಕಾರ್ಪೋರೇಟ್‌ಗಳಿಗೆ ಮಾರಿದೆ: ವಿಪಕ್ಷಗಳ ಆರೋಪ

ಕಾರ್ಪೋರೇಟ್ ಸಂಸ್ಥೆ ದಾಲ್ಮಿಯಾ ಗ್ರೂಪ್ ಗೆ ಐತಿಹಾಸಿಕ ಕೆಂಪು ಕೋಟೆಯನ್ನು ಕೇಂದ್ರ ಸರ್ಕಾರ ಮಾರಿದೆ ಎಂದು ವಿಪಕ್ಷಗಳು ಆರೋಪಿಸಿವೆ...
ಕೆಂಪುಕೋಟೆ
ಕೆಂಪುಕೋಟೆ
ನವದೆಹಲಿ: ಕಾರ್ಪೋರೇಟ್ ಸಂಸ್ಥೆ ದಾಲ್ಮಿಯಾ ಗ್ರೂಪ್ ಗೆ ಐತಿಹಾಸಿಕ ಕೆಂಪು ಕೋಟೆಯನ್ನು ಕೇಂದ್ರ ಸರ್ಕಾರ ಮಾರಿದೆ ಎಂದು ವಿಪಕ್ಷಗಳು ಆರೋಪಿಸಿವೆ. 
2017ರ ವಿಶ್ವ ಪ್ರವಾಸೋಧ್ಯಮ ದಿನದಂದು ಕೇಂದ್ರ ಸರ್ಕಾರವು ಪಾರಂಪರಿಕ ತಾಣಗಳ ಮೌಲ್ಯವರ್ಧನೆಗಾಗಿ ಅವುಗಳನ್ನು ದತ್ತು ನೀಡಲಾಗುವುದು ಆಸಕ್ತಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ದಾಲ್ಮಿಯಾ ಗ್ರೂಪ್ ಕೆಂಪುಕೋಟೆಯನ್ನು ದತ್ತು ಪಡೆದಿದ್ದು ಈ ಸಂಬಂಧ ವಿಪಕ್ಷಗಲು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. 
ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿರುವ ವಿಪಕ್ಷಗಳಾದ ಕಾಂಗ್ರೆಸ್, ಸಿಪಿಐ(ಎಂ) ಮತ್ತು ತೃಣಮೂಲ ಕಾಂಗ್ರೆಸ್ ಭಾರತದ ಸ್ವಾತಂತ್ರ್ಯದ ಸಂಕೇತವಾಗಿರುವ ಕೆಂಪುಕೋಟೆಯನ್ನು ಕೇಂದ್ರ ಸರ್ಕಾರ ಕಾರ್ಪೋರೇಟ್ ಸಂಸ್ಥೆಗೆ ಹಸ್ತಾಂತರಿಸುವುದು ಸರಿಯಲ್ಲ ಎಂದು ಹೇಳಿವೆ. 
ಪ್ರವಾಸೋದ್ಯಮ ಇಲಾಖೆಯ ಕ್ರಮವನ್ನು ತನ್ನ ಟ್ವಿಟ್ಟರ್ ನಲ್ಲಿ ಖಂಡಿಸಿದ ಕಾಂಗ್ರೆಸ್ "ಸರ್ಕಾರ ಸಧ್ಯವೇ ದತ್ತಿ ಕೊಡಲಿರುವ ಈ ಕೆಳಗಿನ ಯಾವುದೆನ್ನುವುದನ್ನು ಗುರುತಿಸಿ - 1. ಸಂಸತ್ತು, 2. ಲೋಕ ಕಲ್ಯಾಣ ಮಾರ್ಗ, 3. ಸರ್ವೋಚ್ಚ ನ್ಯಾಯಾಲಯ. 4. ಮೇಲಿನ ಎಲ್ಲವೂ" ಎಂದು ವ್ಯಂಗ್ಯವಾಡಿದೆ.
ಇನ್ನು ನಮ್ಮ ಲಾಲ್ ಕಿಲಾವನ್ನು ಕೇಂದ್ರ ಸರ್ಕಾರ ಏಕೆ ಕಾಪಾಡಬಾರದು? ಕೆಂಪುಕೋಟೆ ನಮ್ಮ ದೇಶದ ಹೆಮ್ಮೆಯ ಸಂಕೇತವಾಗಿದೆ. ಇಲ್ಲಿ ಸ್ವಾತಂತ್ರ್ಯ ದಿನದಂದು ಭಾರತದ ಧ್ವಜವನ್ನು ಹಾರಿಸಲಾಗುತ್ತದೆ. ಅದನ್ನು ಯಾಕೆ ಗುತ್ತಿಗೆಗೆ ನೀಡಬೇಕು? ಇದು ನಮ್ಮ ಇತಿಹಾಸದಲ್ಲಿ ದುಃಖ ಮತ್ತು ಕರಾಳ ದಿನ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ. 
ಐದು ವರ್ಷ ಅವಧಿಗೆ ದಾಲ್ಮಿಯಾ ಗ್ರೂಪ್ ಕೆಂಪುಕೋಟೆಯಲ್ಲಿ ಮೂಲಭೂತ ಸೌಕರ್ಯವನ್ನು ನಿರ್ಮಿಸುವುದಕ್ಕೆ 25 ಕೋಟಿ ರುಪಾಯಿ ಬಳಸುವುದಾಗಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com