ನವದೆಹಲಿ: ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಇಂದಿರಾ ಬ್ಯಾನರ್ಜಿ ಅವರು ಮಂಗಳವಾರ ಸುಪ್ರೀಂಕೋರ್ಟ್ ನ್ಯಾಯಾಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಇದರೊಂದಿಗೆ ಇದೇ ಮೊದಲ ಬಾರಿಗೆ ಸರ್ವೋಚ್ಛ ನ್ಯಾಯಾಲಯ ಮೂವರು ಮಹಿಳಾ ನ್ಯಾಯಾಧೀಶರನ್ನು ಹೊಂದಿದಂತಾಗಿದೆ.
ಇಂದಿರಾ ಬ್ಯಾನರ್ಜಿ, ಸ್ವಾತಂತ್ರ್ಯ ನಂತರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗುತ್ತಿರುವ ಎಂಟನೇ ಮಹಿಳೆಯಾಗಿದ್ದಾರೆ.
ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿಯವರು 2002ರ ಫೆಬ್ರವರಿಯಲ್ಲಿ ಕೋಲ್ಕತಾ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 2016ರ ಆಗಸ್ಟ್ 8 ರಂದು ದೆಹಲಿ ಹೈಕೋರ್ಟ್'ಗೆ ವರ್ಗಾವಣೆಗೊಂಡ ಅವರು, 2017ರ ಏಪ್ರಿಲ್ 5 ರಂದು ಮದ್ರಾಸ್ ಹೈಕೋರ್ಟ್'ನ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದುಕೊಂಡಿದ್ದರು.
ಇದಕ್ಕು ಮುನ್ನ ಇಂದು ಮಲ್ಹೊತ್ರಾ ಅವರು ಸುಪ್ರೀಂ ಕೋರ್ಟ್ ಏಳನೇ ಮಹಿಳಾ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
ಹಾಲಿ ಮೂವರು ಮಹಿಳಾ ನ್ಯಾಯಾಧೀಶರ ಪೈಕಿ ಆರ್ ಬಾನುಮತಿ ಅವರು ಒಬ್ಬರಾಗಿದ್ದು, ಆಗಸ್ಟ್ 13, 2014ರಲ್ಲಿ ಸುಪ್ರೀಂ ಕೋರ್ಟ್ ನ ಆರನೇ ಮಹಿಳಾ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
1989ರಲ್ಲಿ 39 ವರ್ಷದ ಫಾತಿಮಾ ಬೀವಿ ಅವರು ಸುಪ್ರೀಂ ಕೋರ್ಟ್ ನ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.