'ನಾನು, ನಿನ್ನನ್ನು ಒಂದು ಬಾರಿ ಅಪ್ಪಾ ಎಂದು ಕರೆಯಲೇ?'; ತಲೈವಾರ್ ಗೆ ಪುತ್ರ ಸ್ಟಾಲಿನ್ ನ ಭಾವಪೂರ್ಣ ಪತ್ರ

ತಮಿಳುನಾಡು ಮಾಜಿ ಮುಖ್ಯಮಂತ್ರಿ ಡಿಎಂಕೆ ಅಧ್ಯಕ್ಷ ಎಂ ಕರುಣಾನಿಧಿಯವರ ನಿಧನಕ್ಕೆ ಲಕ್ಷಾಂತರ ಮಂದಿ ...
ಎಂ ಕರುಣಾನಿಧಿ, ಎಂ ಕೆ ಸ್ಟಾಲಿನ್(ಸಂಗ್ರಹ ಚಿತ್ರ)
ಎಂ ಕರುಣಾನಿಧಿ, ಎಂ ಕೆ ಸ್ಟಾಲಿನ್(ಸಂಗ್ರಹ ಚಿತ್ರ)
Updated on

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಡಿಎಂಕೆ ಅಧ್ಯಕ್ಷ ಎಂ ಕರುಣಾನಿಧಿಯವರ ನಿಧನಕ್ಕೆ ಲಕ್ಷಾಂತರ ಮಂದಿ ಅಭಿಮಾನಿಗಳು ಕಂಬನಿಯಲ್ಲಿ ಮುಳುಗಿರುವಾಗ ಅವರ ಪುತ್ರ ಎಂ ಕೆ ಸ್ಟಾಲಿನ್ ಭಾವಪೂರ್ಣ ವಿದಾಯ ಹೇಳಿದ್ದಾರೆ. ಅವರ ಭಾವನೆಗಳನ್ನು ಅಕ್ಷರ ರೂಪಕ್ಕೆ ಇಳಿಸಿದ್ದಾರೆ. ಇಂದಾದರೂ ಈ ಸಂದರ್ಭದಲ್ಲಿಯಾದರೂ ನಾನು ನಿಮ್ಮನ್ನು ಅಪ್ಪಾ ಎಂದು ಒಂದು ಬಾರಿಯಾದರೂ ಕರೆಯಲೇ ಎಂದು ತಮ್ಮ ಪತ್ರಕ್ಕೆ ಶೀರ್ಷಿಕೆ ಬರೆದು ತಮಿಳಿನಲ್ಲಿ ಪತ್ರ ಬರೆದಿದ್ದಾರೆ.

ಅದರ ಅನುವಾದ ಹೀಗಿದೆ: ಅಪ್ಪಾ, ನೀನು ಎಲ್ಲಿಗೆ ಹೋಗುವುದಿದ್ದರೂ ನನಗೆ ಹೇಳಿ ಹೋಗುತ್ತಿದ್ದೆ. ಆದರೆ ಇಂದು ಏಕೆ ನನಗೆ ಹೇಳದೆ ಹೊರಟುಹೋದೆ? ತತ್ತರಿಸುವಂತಹ ಸ್ಥಿತಿಯನ್ನು ನನಗೆ ತಂದಿಟ್ಟು ಎಲ್ಲಿಗೆ ಹೋದೆ ನೀನು? 33 ವರ್ಷಗಳ ಹಿಂದೆ ನಿನ್ನ ಸ್ಮಾರಕದಲ್ಲಿ ಏನು ಬರೆಯಬೇಕೆಂದು ನೀನು ಹೇಳಿದ್ದೆ. ತನ್ನ ಜೀವನವಿಡೀ ಅನಾಯಾಸವಾಗಿ ಹೋರಾಡಿ ಜೀವನ ಮಾಡಿದ ವ್ಯಕ್ತಿ ಇಂದು ಮಲಗಿದ್ದಾನೆ. ತಮಿಳುನಾಡಿಗೆ ಇಲ್ಲಿನ ಜನತೆಗೆ ಸಾಕಷ್ಟು ಸೇವೆ ಮಾಡಿದ್ದೇನೆ ಎಂದು ನೀನು ಇಂದು ನಿರ್ಧರಿಸಿದೆಯೇ?

ಅಥವಾ ಕಳೆದ 80 ವರ್ಷಗಳ ಸಾರ್ವಜನಿಕ ಜೀವನದಲ್ಲಿ ನೀನು ಮಾಡಿರುವ ಸಾಧನೆಯನ್ನು ಯಾರಾದರೂ ಸೋಲಿಸುತ್ತಾರೆಯೇ ಎಂದು ಮರೆಯಲ್ಲಿ ನಿಂತು ನೋಡುತ್ತಿರುವೆಯಾ? ಕಳೆದ ಜೂನ್ 3ರಂದು ನಿನ್ನ ಹುಟ್ಟುಹಬ್ಬದ ದಿನ ನಿನ್ನ ಸಾಮರ್ಥ್ಯದ ಅರ್ಧದಷ್ಟಾದರೂ ನನಗೆ ಕೊಡು ಎಂದು ನಾನು ಬೇಡಿಕೊಂಡಿದ್ದೆ. ಎಷ್ಟೋ ವರ್ಷಗಳ ಹಿಂದೆ ಅರಿಗ್ನಾರ್ ಅಣ್ಣಾ ಅವರಿಂದ ಪಡೆದ ಹೃದಯವನ್ನು ನನಗೆ ಕೊಡುವೆಯಾ? ಯಾಕೆಂದರೆ ಆ ಅತ್ಯಮೂಲ್ಯ ಕೊಡುಗೆಯಿಂದ ನಿನ್ನ ಕನಸು, ಆದರ್ಶಗಳಲ್ಲಿ ಅರ್ಧದಷ್ಟನ್ನಾದರೂ ಈಡೇರಿಸಬಹುದಲ್ಲವೇ?

ಕೋಟ್ಯಂತರ ಉಡುಪಪ್ಪಕ್ಕಲ್ (ಡಿಎಂಕೆ ಕಾರ್ಯಕರ್ತರನ್ನು, ಅಭಿಮಾನಿಗಳನ್ನು ಕರುಣಾನಿಧಿಯವರು ರಕ್ತ ಸಹೋದರರು ಎಂದು ಕರೆಯುತ್ತಿದ್ದ ಶಬ್ದ) ಅವರ ಪರವಾಗಿ ನಾನು ನಿನಗೆ ವಿನಂತಿ ಮಾಡಿಕೊಳ್ಳುತ್ತಿದ್ದೇನೆ, ಕೇವಲ ಒಂದು ಬಾರಿ ಉಡುಪಪ್ಪಕ್ಕಲ್ ಎಂದು ಹೇಳು, ಅದರಿಂದ ನಮಗೆ ಶಕ್ತಿ, ಉತ್ಸಾಹ ತುಂಬಿ ಶತಮಾನದವರೆಗೆ ಕೆಲಸ ಮಾಡುವ ಚೈತನ್ಯ ಬರುತ್ತದೆ. ನಾನು ನಿನ್ನನ್ನು ಅಪ್ಪಾ ಎಂದು ಕರೆಯುವ ಬದಲು ತಲೈವರೆ(ನಾಯಕ) ಎಂದು ನನ್ನ ಜೀವನದ ಬಹುತೇಕ ಸಮಯ ಕರೆಯುತ್ತಿದ್ದೆ. ಇದೀಗ ಮತ್ತೊಮ್ಮೆ ಒಂದು ಬಾರಿ ಅಪ್ಪಾ ಎಂದು ಕರೆಯಲೇ?

ಕಂಬನಿ ತುಂಬಿದ ಕಂಗಳ ನಿನ್ನ ಮಗ, ಎಂ ಕೆ ಸ್ಟಾಲಿನ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com