ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಜೈ ಜವಾನ್, ಜೈ ಕಿಸಾನ್ ಮತ್ತು ಜೈ ವಿಜ್ಞಾನ್ ಎಂದು ಘೋಷಿಸುವ ಮೂಲಕ ಭಾರತದ ಅಭಿವೃದ್ಧಿಗೆ ನಾಂದಿ ಹಾಡಿದ್ದರು.
ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಜೈ ಜವಾನ್, ಜೈ ಕಿಸಾನ್ ಎಂದು ಘೋಷಿಸುವ ಮೂಲಕ ದೇಶದಲ್ಲಿ ಯೋಧರಷ್ಟೇ ರೈತರೂ ಮುಖ್ಯ ಎಂದು ಪ್ರತಿಪಾದಿಸಿದ್ದರು. ವಾಜಪೇಯಿ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜೈ ವಿಜ್ಞಾನ್ ಎಂದು ಹೇಳುವ ಮೂಲಕ ಅವರು ವಿಜ್ಞಾನದ ಮಹತ್ವ ಸಾರಿದ್ದರು.
ಯೋಧರು ಮತ್ತು ರೈತರು ಜೊತೆಗೆ ವಿಜ್ಞಾನಿಯೂ ದೇಶದಲ್ಲಿ ಅತಿ ಮುಖ್ಯ ಎಂಬುದು ಅವರ ನುಡಿಗಟ್ಟಿನ ಕಳಕಳಿಯಾಗಿತ್ತು. ಇನ್ನು ಅಟಲ್ ಜೀ ಅವರು ತಮ್ಮ ಆಡಳಿತಾವಧಿಯಲ್ಲಿ ವಿಜ್ಞಾನ ಕ್ಷೇತ್ರಕ್ಕೂ ಪ್ರಾಮುಖ್ಯತೆ ನೀಡಿದ್ದರು.
ಅಮೆರಿಕ ಸೇರಿದಂತೆ ಜಗತ್ತಿನ ಅನೇಕ ಪ್ರಮುಖ ರಾಷ್ಟ್ರಗಳು ಭಾರತ ಅಣ್ವಸ್ತ್ರ ಪರೀಕ್ಷೆ ನಡೆಸಲು ವಿರೋಧ ವ್ಯಕ್ತಪಡಿಸುತ್ತಿದ್ದವು. ಅಂಥ ಎಲ್ಲ ವಿರೋಧಗಳಿಗೂ ಎದೆಗೊಟ್ಟು ನಿಂತ ವಾಜಪೇಯಿ ಅವರು 1998ರಲ್ಲಿ ಪೋಕ್ರಾನ್ ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿಯೇ ಬಿಟ್ಟರು. ನಾವು ಬಹುದೊಡ್ಡ ಅಣ್ವಸ್ತ್ರ ಹೊಂದಿದ್ದೇವೆ. ನಮ್ಮ ಮೇಲೆ ಯಾರೂ ದಾಳಿ ಮಾಡಲು ಸಾಧ್ಯವಿಲ್ಲ ಎಂದು ಅಣ್ವಸ್ತ್ರ ಪರೀಕ್ಷೆ ವೇಳೆ ವಾಜಪೇಯಿ ಆತ್ಮವಿಶ್ವಾಸದಿಂದ ನುಡಿದಿದ್ದರು.