ಪಿಒಕೆ ಅಧ್ಯಕ್ಷರ ಪಕ್ಕದಲ್ಲೇ ಆಸೀನ ವಿವಾದ: ಅಲ್ಲಿಯೇ ಕುಳಿತುಕೊಳ್ಳಲು ಕೇಳಿದರು- ಸಿಧು
ಪಂಜಾಬ್ : ಪಾಕ್ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಿಒಕೆ ಅಧ್ಯಕ್ಷರ ಪಕ್ಕದಲ್ಲೇ ಕುಳಿತು ಸುದ್ದಿಯಾಗಿದ್ದ ಮಾಜಿ ಕ್ರಿಕೆಟಿಗ, ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಆತ್ತರಿ-ವಾಘಾ ಗಡಿ ಮೂಲಕ ಇಂದು ಭಾರತಕ್ಕೆ ವಾಪಾಸ್ಸಾಗಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಎಲ್ಲೋ ಕುಳಿತುಕೊಳ್ಳುತ್ತಿದ್ದೆ ಆದರೆ ಅಲ್ಲಿ ಕುಳಿತುಕೊಳ್ಳಲು ಅವರು ನನ್ನನ್ನು ಕೇಳಿದ್ದರಿಂದ ಪಿಒಕೆ ಅಧ್ಯಕ್ಷರ ಬಳಿ ಕುಳಿತುಕೊಂಡಿದ್ದಾಗಿ ಪ್ರತಿಕ್ರಿಯಿಸಿದ್ದಾರೆ.
ಪಾಕ್ ಸೇನಾ ಮುಖ್ಯಸ್ಥ ಜನರಲ್ ಬಜ್ವಾ ನನ್ನ ಹತ್ತಿರ ಬಂದು ನಾವು ಅದೇ ಸಂಸ್ಕೃತಿಯವರಾಗಿದ್ದೇವೆ ಮತ್ತು ನಾವು ಗುರು ನಾನಕ್ ದೇವ್ ಅವರ 550 ನೇ ಪ್ರಕಾಶ್ ಪರ್ವಕ್ಕಾಗಿ ಕಾರ್ತಾರ್ಪುರ್ ಗಡಿಯನ್ನು ತೆರೆಯುತ್ತೇವೆ ಎಂದು ಹೇಳಿದರು. ನಾನು ಬೇರೆ ಏನು ಮಾಡಬಹುದು ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡಿದರು.
ಎಲ್ಲೋ ಗೌರವಾರ್ಥ ಅತಿಥಿಯಾಗಿ ನಿಮ್ಮನ್ನು ಆಹ್ವಾನಿಸಿದರೆ, ನಿಮ್ಮನ್ನು ಕೇಳಿದಾಗ ನೀವು ಕುಳಿತುಕೊಳ್ಳುತ್ತೀರಿ ತಾನೇ ಎಂದು ನವಜೋತ್ ಸಿಧು ಹೇಳಿದರು.
ಪಾಕ್ ಪ್ರಧಾನಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಧು ಅಲ್ಲಿನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಅವರನ್ನು ಆಲಿಂಗಿಸಿಕೊಂಡಿದ್ದು, ಪಿಒಕೆ ಅಧ್ಯಕ್ಷರ ಪಕ್ಕದಲ್ಲೇ ಕುಳಿತಿದ್ದರು, ಇದರ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ