ಪಾಕ್ ಸೇನಾ ಮುಖ್ಯಸ್ಥರ ಆಲಿಂಗನ; ನವಜೋತ್ ಸಿಂಗ್ ಸಿದು ವಿರುದ್ಧ ಕೇಸು ದಾಖಲು

ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಸರ್ಕಾರದ ಪ್ರವಾಸೋದ್ಯಮ ಸಚಿವ ...
ಪಾಕ್ ಸೇನಾ ಮುಖ್ಯಸ್ಥರನ್ನು ಆಲಂಗಿಸಿದ್ದ ನವಜೋತ್ ಸಿಂಗ್ ಸಿದು
ಪಾಕ್ ಸೇನಾ ಮುಖ್ಯಸ್ಥರನ್ನು ಆಲಂಗಿಸಿದ್ದ ನವಜೋತ್ ಸಿಂಗ್ ಸಿದು

ನವದೆಹಲಿ: ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಸರ್ಕಾರದ ಪ್ರವಾಸೋದ್ಯಮ ಸಚಿವ ನವಜೋದ್ ಸಿಂಗ್ ಸಿದು ವಿರುದ್ಧ ಬಿಹಾರದ ಮುಜಾಫರ್ ಪುರ ನ್ಯಾಯಾಲಯದಲ್ಲಿ ದೇಶದ್ರೋಹ ಪ್ರಕರಣ ದಾಖಲಾಗಿದೆ.

ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಅಲ್ಲಿನ ಸೇನಾ ಮುಖ್ಯಸ್ಥರನ್ನು ಆಲಂಗಿಸಿಕೊಳ್ಳುವ ಮೂಲಕ ಭಾರತೀಯ ಸೇನೆಗೆ ಸಿದು ಅವಮಾನ ಮಾಡಿದ್ದಾರೆ ಎಂದು ಕೇಸು ದಾಖಲಾಗಿದೆ.

ನ್ಯಾಯವಾದಿ ಸುಧೀರ್ ಒಜ್ಹ ಮುಜಾಫರ್ ಪುರ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಕೇಸು ದಾಖಲಿಸಿದ್ದಾರೆ. ದೇಶದ್ರೋಹ ಕಾನೂನಿನಡಿಯಲ್ಲಿ ಸಚಿವ ಸಿಧು ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಒಜ್ಹಾ ತಿಳಿಸಿದ್ದಾರೆ.

ಸಿಧು ಅವರ ಸನ್ನೆ ಮತ್ತು ನಡವಳಿಕೆಯಿಂದ ಭಾರತೀಯರಿಗೆ ನೋವಾಗಿದೆ ಎಂದು ಹೇಳಿರುವ ಅವರು, ನ್ಯಾಯಾಲಯ ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ವಾರ ವಿಚಾರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಇನ್ನು, ಪಾಕಿಸ್ತಾನ ಸೇನಾ ಮುಖ್ಯಸ್ಥರನ್ನು ಆಲಿಂಗನ ಮಾಡಿದ್ದ ತನ್ನ ಸಂಪುಟ ಸಹೋದ್ಯೋಗಿ ವಿರುದ್ಧ ನಿನ್ನೆ ಹರಿಹಾಯ್ದಿದ್ದ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಪಾಕ್ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ ಮೇಲೆ ಸಿದು ಒಲವು  ತೋರಿಸಬಾರದಿತ್ತು ಎಂದು ಹೇಳಿದ್ದಾರೆ.

ಪ್ರತಿದಿನ ನಮ್ಮ ಸೈನಿಕರು ಹುತಾತ್ಮರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಲ್ಲಿನ ಸೇನಾ ಮುಖ್ಯಸ್ಥರನ್ನು ಆಲಿಂಗನ ಮಾಡುವುದು ಸರಿಯಲ್ಲ, ಅದನ್ನು ನವಜೋತ್ ಸಿಂಗ್ ಸಿಧು ಅರ್ಥ ಮಾಡಿಕೊಳ್ಳಬೇಕಾಗಿತ್ತು ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com