ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ನಡೆದ ಮೂವರು ಭಾರತೀಯ ಜನತಾ ಪಕ್ಷ ಕಾರ್ಯಕರ್ತರ ಹತ್ಯೆ ಸಂಬಂಧ ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ ಪಶ್ಚಿಮ ಬಂಗಾಳ ಸರ್ಕಾರ ಪ್ರತಿಕ್ರಿಯೆ ಕೇಳಿದೆ.
ಬಿಜೆಪಿ ನಾಯಕ ಗೌರವ್ ಭಾಟಿಯಾ ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡಿರುವ ನ್ಯಾಯಾಲಯ ಕೆಂದ್ರ ಹಾಗೂ ಪ. ಬಂಗಾಳ ರಾಜ್ಯ ಸರ್ಕಾರಗಳಿಗೆ ನೋಟೀಸ್ ಜಾರಿ ಮಾಡಿದೆ.
ಮೇ 30 ರಂದು ಬಲರಾಂಪುರ್ ಜಿಲ್ಲೆ ಪುರುಲಿಮಾದಲ್ಲಿ 18 ವರ್ಷದ ಬಿಜೆಪಿ ಕಾರ್ಯಕರ್ತ ತ್ರಿಲೋಚನ್ ಮಹತೋ ಮರದಲ್ಲಿ ನೇಣು ಹಾಕಿಕೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಇದಾಗಿ ತಿಂಗಳಾಗುವುದರಲ್ಲಿ ಇನ್ನೊಬ್ಬ ಬಿಜೆಪಿ ಕಾರ್ಯಕರ್ತ ದುಲಾಲ್ ಕುಮಾರ್ ಸಹ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದನು.
ಜುಲೈ 28 ರಂದು ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ ಪ್ರದೇಶದಲ್ಲಿ ಬಿಜೆಪಿ ಮುಖಂಡಶಕ್ತಿಪಾದ ಸರ್ದಾರ್ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಮೂರು ಬಿಜೆಪಿ ಮುಖಂಡರ ಸಾವು ರಾಜ್ಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದ್ದು ಇದಕ್ಕೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಕಾರಣ ಎಂದು ಬಿಜೆಪಿ ಆರೋಪಿಸಿದೆ.
ಇದೀಗ ಮೂವರು ಕಾರ್ಯಕರ್ತರ ಹತ್ಯೆಯ ತನಿಖೆಯನ್ನು ಸಿಬಿಐ ಗೆ ವಹಿಸಬೇಕೆಂದು ಬಿಜೆಪಿ ನಾಯಕ ಗೌರವ್ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ.