
ಗ್ವಾಲಿಯರ್(ಮಧ್ಯ ಪ್ರದೇಶ): ಬಿಜೆಪಿ ನಾಯಕರು ಮತಗಳಿಗಾಗಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಹಿಡಿದು ದೇಶಾದ್ಯಂತ ತಿರುಗುತ್ತಿದ್ದಾರೆ ಎಂದು ಅಟಲ್ ಬಿಹಾರಿ ವಾಜಪೇಯಿ ಅವರ ಸೋದರ ಸಂಬಂಧಿ ಹಾಗೂ ಕಾಂಗ್ರೆಸ್ ನಾಯಕಿ ಕರುಣಾ ಶುಕ್ಲಾ ಮಾಡಿರುವ ಆರೋಪವನ್ನು ವಾಜಪೇಯಿಯವರ ಮತ್ತೊಬ್ಬ ಸೋದರ ಸಂಬಂಧಿ ಕಾಂತಿ ಮಿಶ್ರಾ ನಿರಾಕರಿಸಿದ್ದಾರೆ.
ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ವಾಜಪೇಯಿಯವರು ನನಗೆ ಅಥವಾ ಕರುಣಾ ಅವರಿಗೆ ಸೇರಿದವರಲ್ಲ, ಅವರು ಇಡೀ ದೇಶಕ್ಕೆ ಸೇರಿದವರಾಗಿದ್ದಾರೆ. ಪ್ರತಿಯೊಬ್ಬರೂ ದೆಹಲಿಗೆ ಹೋಗಲು ಸಾಧ್ಯವಿಲ್ಲ. ಹೀಗಾಗಿ ಕಲಶ ತಮ್ಮ ರಾಜ್ಯಕ್ಕೆ ಬಂದಾಗ ಅಂತಿಮ ಗೌರವ ಸಲ್ಲಿಸಲು ಅನೇಕರಿಗೆ ಅವಕಾಶ ಸಿಗಬಹುದು ಎಂದಿದ್ದಾರೆ.
ಕರುಣಾ ಶುಕ್ಲ ಅವರ ಹೇಳಿಕೆಗೆ ಕಾಂತಿ ಮಿಶ್ರಾ ಈ ಪ್ರತಿಕ್ರಿಯೆ ನೀಡಿದ್ದಾರೆ.
ವಾಜಪೇಯಿಯವರು ಕಳೆದ 16ರಂದು ನಿಧನರಾದ ನಂತರ ಅವರ ಚಿತಾಭಸ್ಮವನ್ನು ಬಿಜೆಪಿ ನಾಯಕರು ವಿವಿಧ ರಾಜ್ಯಗಳಿಗೆ ತೆಗೆದುಕೊಂಡು ಹೋಗಿ ನದಿಯಲ್ಲಿ ಬಿಡಲಾಗುತ್ತಿದೆ.
Advertisement