ನೋಟು ನಿಷೇಧ ಸಾಮಾನ್ಯ ತಪ್ಪಲ್ಲ, ಅದು ಜನರ ಮೇಲಿನ ಉದ್ದೇಶಪೂರ್ವಕ ದಾಳಿ: ರಾಹುಲ್

ನೋಟು ಅಮಾನ್ಯೀಕರಣ ತಪ್ಪಲ್ಲ. ಅದೊಂದು ಪ್ರಮಾದ. ಜನರ ಮೇಲಿನ ಉದ್ದೇಶಪೂರ್ವ ದಾಳಿ ಎಂದು ಕಾಂಗ್ರೆಸ್...
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ನವದೆಹಲಿ: ನೋಟು ಅಮಾನ್ಯೀಕರಣ ತಪ್ಪಲ್ಲ. ಅದೊಂದು ಪ್ರಮಾದ. ಜನರ ಮೇಲಿನ ಉದ್ದೇಶಪೂರ್ವ ದಾಳಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಗುರುವಾರ ಆರೋಪಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನೋಟು ಅಮಾನ್ಯೀಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಗರಿಷ್ಠ ಮೌಲ್ಯದ ನೋಟು ನಿಷೇಧದಿಂದ ನೀವು ಏನು ಸಾಧಿಸಿದ್ದೀರಿ? ಎಂದು ಪ್ರಧಾನಿಯನ್ನು ಪ್ರಶ್ನಿಸಿದ ರಾಹುಲ್, ದೇಶದಲ್ಲಿ ನಿರುದ್ಯೋಗದಂತಹ ಹಲವು ಸಮಸ್ಯೆಗಳ ನಡುವೆಯೇ ಜನತೆಗೆ ನೋಟ್ ನಿಷೇಧದ ಬರೆ ಎಳೆದದ್ದು ಏಕೆ? ಈ ಬಗ್ಗೆ ಪ್ರಧಾನಿ ಉತ್ತರಿಸಬೇಕು ಎಂದರು.
ನೋಟ್ ನಿಷೇಧದ ಮೂಲಕ ದೊಡ್ಡ ದೊಡ್ಡ ಬಂಡವಾಳಶಾಹಿ ಕುಳಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಜನಸಾಮಾನ್ಯರು ಕಷ್ಟ ಅನುಭವಿಸುವಂತಾಯಿತು ಎಂದು ರಾಹುಲ್ ವಾಗ್ದಾಳಿ ನಡೆಸಿದರು.
ಈ ತಪ್ಪಿಗಾಗಿ ನೀವು (ಪ್ರಧಾನಿ) ಕ್ಷಮೆ ಕೇಳಬೇಕಿತ್ತು. ಆದರೆ ಪ್ರಧಾನಿ ಮೋದಿ ಅವರು ಅದನ್ನು ತುಂಬಾ ಬುದ್ಧಿವಂತಿಕೆಯಿಂದ ನುಣುಚಿಕೊಂಡಿದ್ದಾರೆ ಎಂದು ಹೇಳಿದರು.
ಆರ್ ಬಿಐನ ವಾರ್ಷಿಕ ವರದಿ ಪ್ರಕಾರ, 2016ರ ನವೆಂಬರ್ 8ರಂದು ಪ್ರಧಾನಿ ಮೋದಿ ಅವರು ನಿಷೇಧಿಸಿದ್ದ 500 ರು. ಹಾಗೂ 1000 ರುಪಾಯಿ ನೋಟುಗಳು ಶೇ.99ರಷ್ಟು ವಾಪಸ್ ಬಂದಿರುವುದಾಗಿ ತಿಳಿಸಿದೆ. ಹೀಗಾಗಿ ನೋಟು ಅಮಾನ್ಯೀಕರಣ ಒಂದು ದೊಡ್ಡ ಹಗರಣಕ್ಕಿಂತ ಕಡಿಮೆಯೇನಲ್ಲ ಎಂದು ರಾಹುಲ್ ಹೇಳಿದರು.
ನೋಟು ನಿಷೇಧದಿಂದ ಕಪ್ಪು ಹಣ ಹೊರತರಲು ಹಾಗೂ ಭ್ರಷ್ಟಾಚಾರ ಮಟ್ಟಹಾಕಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸರ್ಕಾರ ವಿಶ್ಲೇಷಿಸಿತ್ತು. ಆದರೆ 2016ರ ನವೆಂಬರ್ 8ರಂದು ಚಲಾವಣೆಯಲ್ಲಿದ್ದ 15.41 ಲಕ್ಷ ಕೋಟಿ ರು.ಮೌಲ್ಯದ 500, 1000 ರು. ಮುಖಬೆಲೆಯ ನೋಟುಗಳು ನಿಷೇಧಿಸಲಾಯಿತು. ಅವುಗಳಲ್ಲಿ 15.31 ಲಕ್ಷ ಕೋಟಿ ರು. ಮೌಲ್ಯದ ನೋಟುಗಳು ವಾಪಸ್ ಬಂದಿದೆ. ಅಂದರೆ 10, 720 ಕೋಟಿ ರು. ಹಣ ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಾಸ್ಸಾಗಿಲ್ಲ. ಇದರಿಂದ ಕೇಂದ್ರ ಸರ್ಕಾರ ಏನು ಸಾಧಿಸಿದಂತಾಗಿದೆ ಎಂದು ರಾಹುಲ್ ಪ್ರಶ್ನಿಸಿದ್ದಾರೆ. 
ನೋಟು ಅಮಾನ್ಯೀಕರಣದಿಂದ ದೇಶದ ಆರ್ಥಿಕ ಸ್ಥಿತಿ ಹಳಿ ತಪ್ಪಿದಂತಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com