

ನವದೆಹಲಿ: ಸರ್ಕಾರಿ ಇಲಾಖೆಗಳು ಮತ್ತು ಸಚಿವಾಲಯಗಳಿಗೆ ಸಿಬ್ಬಂದಿಗಳ ಆಯ್ಕೆಗೆ ನಡೆಸಲಾಗುವ ಸಿಬ್ಬಂದಿ ನೇಮಕಾತಿ ಪರೀಕ್ಷೆ-2017ರ(ಎಸ್ಎಸ್ ಸಿ) ಫಲಿತಾಂಶ ಘೋಷಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಸಂಪೂರ್ಣ ಪರೀಕ್ಷಾ ಪ್ರಕ್ರಿಯೆಯೇ ದೋಷಮುಕ್ತವಾಗಿ ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಫಲಿತಾಂಶವನ್ನು ತಡೆಹಿಡಿಯಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಿಬ್ಬಂದಿ ನೇಮಕಾತಿ ಪರೀಕ್ಷೆ-2017 ದೋಷಪೂರಿತವಾಗಿ ಕಂಡುಬಂದಿರುವುದರಿಂದ ಈ ಮೂಲಕ ಸಿಬ್ಬಂದಿಗಳ ನೇಮಕಾತಿಯನ್ನು ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಎಸ್ ಎ ಬೊಬ್ಡೆ ಮತ್ತು ಎಲ್ ನಾಗೇಶ್ವರ ರಾವ್ ಅವರನ್ನೊಳಗೊಂಡ ನ್ಯಾಯಪೀಠ ಫಲಿತಾಂಶ ಘೋಷಣೆಗೆ ತಡೆತಂದಿದೆ.ಮೇಲ್ನೋಟಕ್ಕೆ ಇಡೀ ಸಿಬ್ಬಂದಿ ನೇಮಕಾತಿ ಆಯೋಗದ ವ್ಯವಸ್ಥೆ ದೋಷಪೂರಿತವಾಗಿ ಮತ್ತು ಪರೀಕ್ಷಾ ವಿಧಾನ ಸರಿಯಾಗಿ ನಡೆಯದಿರುವುದು ಕಂಡುಬರುತ್ತಿದೆ, ಪರೀಕ್ಷಾ ಉಸ್ತುವಾರಿಗಳು ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿರಬಹುದು ಎಂದು ನಂಬಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಇದೇ ವೇಳೆ ನ್ಯಾಯಾಲಯ ಸಿಬಿಐ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಮ್ ಜಿತ್ ಬ್ಯಾನರ್ಜಿ ಎಸ್ಎಸ್ ಸಿ ಅಧಿಕಾರಿಗಳ ಪರವಾಗಿ ಧೋರಣೆ ತಳೆದು ಅರ್ಜಿ ಸಲ್ಲಿಸಿರುವುದನ್ನು ತಳ್ಳಿ ಹಾಕಿದ್ದಾರೆ.