ಹೋರಾಟಗಾರರ ಪತ್ರ 'ರಾಜೀವ್ ಗಾಂಧಿ-ತರಹದ' ಘಟನೆ ಬಗ್ಗೆ ಮಾತನಾಡಿದೆ: ಪುಣೆ ಪೊಲೀಸರು

ಬಂಧಿತ ಐವರು ಹೋರಾಟಗಾರರು ನಿಷೇಧಿದ ನಕ್ಸಲ್ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಬಗ್ಗೆ....
ಪರಮ್ ಬಿರ್ ಸಿಂಗ್
ಪರಮ್ ಬಿರ್ ಸಿಂಗ್
ಮುಂಬೈ: ಬಂಧಿತ ಐವರು ಹೋರಾಟಗಾರರು ನಿಷೇಧಿದ ನಕ್ಸಲ್ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಬಗ್ಗೆ ಸ್ಪಷ್ಟ ಪುರಾವೆ ಸಿಕ್ಕ ನಂತರವೇ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಶುಕ್ರವಾರ ಮಹಾರಾಷ್ಟ್ರ ಪೊಲೀಸರು ಹೇಳಿದ್ದಾರೆ.
ನಕ್ಸಲರೊಂದಿಗೆ ಅವರು ನಂಟು ಹೊಂದಿರುವುದು ಸ್ಪಷ್ಟವಾದ ನಂತರವೇ ನಾವು ವಿವಿಧ ನಗರಗಳಲ್ಲಿ ದಾಳಿ ನಡೆಸಿ ಕ್ರಮ ತೆಗೆದುಕೊಂಡಿದ್ದೇವ ಎಂದು ಮಹಾರಾಷ್ಟ್ರ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪರಮ್ ಬಿರ್ ಸಿಂಗ್ ಅವರು ತಿಳಿಸಿದ್ದಾರೆ.
ಹೋರಾಟಗಾರರ ಪತ್ರವೊಂದು ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲಿ ಮತ್ತೊಂದು ಹತ್ಯೆ ನಡೆಸುವ ಕುರಿತು ಮಾತನಾಡಿದೆ ಎಂದು ಪರಮ್ ಬಿರ್ ಸಿಂಗ್ ಅವರು ಹೇಳಿದ್ದಾರೆ.

ರೋನಾ ವಿಲ್ಸನ್ ಮತ್ತು ಸಿಪಿಐ-ಮಾವೋ ನಾಯಕನ ನಡುವಿನ ಇ-ಮೇಲ್ ಪತ್ರದಲ್ಲಿ ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ 'ಮೋದಿ ರಾಜ್' ಅಂತ್ಯಗೊಳಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪತ್ರದಲ್ಲಿ ಗ್ರೆನೇಡ್ ಲಾಂಚರ್ ಖರೀದಿಗಾಗಿ ಹಣವನ್ನು ಕೇಳಲಾಗಿದೆ. ನಕ್ಸಲರು ಮತ್ತು ಹೋರಾಟಗಾರರ ನಡುವಿನ ಹಲವು ಪತ್ರಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.
ದೇಶಾದ್ಯಂತ ಮಾನವ ಹಕ್ಕು ಹೋರಾಟಗಾರರ ಬಂಧನವನ್ನು ಪ್ರತಿಪಕ್ಷಗಳು ಹಾಗೂ ಹೋರಾಟಗಾರರ ಸಹೋದ್ಯೋಗಿಗಳು ತೀವ್ರವಾಗಿ ಖಂಡಿಸಿದ್ದರು. ಆದರೆ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿರುವ ಮಹಾ ಪೊಲೀಸರು, ನಕ್ಸಲರು ದೊಡ್ಡ ಸಂಚು ರೂಪಿಸಿದ್ದು, ಅದಕ್ಕೆ ಬಂಧಿತ ಹೋರಾಟಗಾರರು ಸಹಾಯ ಮಾಡುತ್ತಿರುವುದು ನಮ್ಮ ತನಿಖೆಯಿಂದ ಬಹಿರಂಗವಾಗಿದೆ ಎಂದು ಹೇಳಿದ್ದಾರೆ.
ಕಳೆದ ಮಂಗಳವಾರ ದೆಹಲಿ, ಹೈದರಾಬಾದ್ ಸೇರಿದಂತೆ ದೇಶದ 10 ಹೋರಾಟಗಾರರ ಮನೆ ಮೇಲೆ ದಾಳಿ ನಡೆಸಿದ್ದ ಪುಣೆ ಪೊಲೀಸರು, ಕ್ರಾಂತಿಕಾರಿ ಬರಹಗಾರ ವರವರ ರಾವ್ ಸೇರಿದಂತೆ ಐವರು ಹೋರಾಟಗಾರರನ್ನು ಬಂಧಿಸಿದ್ದು, ಸುಪ್ರೀಂ ಕೋರ್ಟ್ ಆದೇಶದಂತೆ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com