
ನವದೆಹಲಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಸುಕ್ಕೂರ್ ನಲ್ಲಿರುವ ಸದ್ಗುರು ಸಂತ ಶಾದರಾಮ ಸಾಹಿಬ್ ರ 310ನೇ ಜನ್ಮದಿನಾಚರಣೆಗೆ 220ಕ್ಕೂ ಅಧಿಕ ಮಂದಿ ಭಾರತೀಯ ಯಾತ್ರಿಕರಿಗೆ ವೀಸಾ ನೀಡಲಾಗಿದೆ ಎಂದು ಪಾಕಿಸ್ತಾನ ಹೈ ಕಮಿಷನ್ ಪ್ರಕಟಣೆ ತಿಳಿಸಿದೆ.ಸಂತ ಶಾದರಾಮ್ ಜನ್ಮ ವರ್ಷಾಚರಣೆ ಕಾರ್ಯಕ್ರಮ ಇದೇ ತಿಂಗಳು ಈಗಾಗಲೇ ಆರಂಭವಾಗಿದ್ದು 16ರವರೆಗೆ ಮುಂದುವರಿಯಲಿದೆ.
ಎರಡೂ ದೇಶಗಳ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ದ್ವಿಪಕ್ಷೀಯ ಶಿಷ್ಟಾಚಾರದ ಚೌಕಟ್ಟಿನಡಿಯಲ್ಲಿ ಭಾರತದ ಸಿಖ್ ಮತ್ತು ಹಿಂದೂ ಯಾತ್ರಿಕರು ಪ್ರತಿವರ್ಷ ಪಾಕಿಸ್ತಾನಕ್ಕೆ ಹೋಗುವ ಪದ್ಧತಿಯಿರುತ್ತದೆ.
ಲಾಹೊರ್ ನಲ್ಲಿ 1708ನೇ ಇಸವಿಯಲ್ಲಿ ಜನಿಸಿದ್ದ ಶಾದರಾಮ್ ಸಾಹಿಬ್ ಸಿಂಧ್ ಪ್ರಾಂತ್ಯದ ಪಿಟಫಿ ಪ್ರದೇಶದಲ್ಲಿ 300 ವರ್ಷಗಳ ಹಳೆಯ ಶಾದನಿ ದರ್ಬಾರ್ ತೀರ್ಥ ಕ್ಷೇತ್ರಕ್ಕೆ ಅಂದು ಶಿಲಾನ್ಯಾಸ ನೆರವೇರಿಸಿದ್ದರು. ಈ ದೇವಾಲಯಕ್ಕೆ ವಿಶ್ವದ ನಾನಾ ಭಾಗಗಳಿಂದ ಭಕ್ತರು ಪ್ರತಿವರ್ಷ ಭೇಟಿ ನೀಡುತ್ತಾರೆ.
ಜನರು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದನ್ನು ಪ್ರೋತ್ಸಾಹಿಸಲು ಮತ್ತು ಜನರ ನಡುವೆ ಉತ್ತಮ ಬಾಂಧವ್ಯ ವಿನಿಮಯಕ್ಕೆ ಯಾತ್ರಿಕರ ವೀಸಾವನ್ನು ಪಾಕಿಸ್ತಾನ ಸರ್ಕಾರ ನೀಡುತ್ತದೆ ಎಂದು ಪಾಕಿಸ್ತಾನ ಹೈ ಕಮಿಷನ್ ತಿಳಿಸಿದೆ.
Advertisement