ಒಮ್ಮೆ ಸಾಲ ತೀರಿಸಿಲ್ಲ ಎಂದು ಮಲ್ಯರನ್ನು 'ವಂಚಕ' ಎನ್ನಬೇಡಿ: ನಿತಿನ್ ಗಡ್ಕರಿ

ಒಂದೇ ಒಂದು ಬಾರಿ ಸಾಲ ತೀರಿಸಲಾಗದೆ ಹೋದ ಮಾತ್ರಕ್ಕೆ ವಿಜಯ್ ಮಲ್ಯರನ್ನು "ಕಳ್ಳ" ಎನ್ನುವುದು ಸರಿಯಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ
ಮುಂಬೈ: ಒಂದೇ ಒಂದು ಬಾರಿ ಸಾಲ ತೀರಿಸಲಾಗದೆ ಹೋದ ಮಾತ್ರಕ್ಕೆ ವಿಜಯ್ ಮಲ್ಯರನ್ನು "ಕಳ್ಳ" ಎನ್ನುವುದು ಸರಿಯಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಮುಂಬೈನಲ್ಲಿ ಮಾತನಾಡಿದ ಗಡ್ಕರಿ ವಿಜಯ್ ಮಲ್ಯರನ್ನು ಉದ್ದೇಶಪೂರ್ವಕ ಸುಸ್ತಿದಾರ ಎಂದು ಕರೆಯುವುದು ಸರಿಯಲ್ಲ, ಅವರು ಉದ್ಯಮಿ, ಒಮ್ಮೆ ಸಾಲ ತೀರಿಸಲು ವಿಫಲರಾಗಿದ್ದಾರೆ. ಇನ್ನೊಂದು ಅವಕಾಶ ನೀಡಿ ನೋಡಬಹುದು ಎಂದರು.
ಹಲವು ವರ್ಷಗಳ ಹಿಂದೆ ಮಹಾರಾಷ್ಟ್ರ ಸರ್ಕಾರ ವಿಜಯ್ ಮಲ್ಯಗೆ ಸರ್ಕಾರಿ ಸ್ವಾಮ್ಯದ ಸಿಕೋಮ್ ಮೂಲಕವೇ ಸಾಲ ನೀಡಿತ್ತು.ಕಳೆದ ನಲವತ್ತು ವರ್ಷಗಳಿಂದ ಮಲ್ಯ ಅದಕ್ಕೆ ಬಡ್ಡಿ ಕಟ್ಟುತ್ತಾ ಬಂದಿದ್ದಾರೆ.ಆದರೆ ಅವರು ವೈಮಾನಿಕ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಬಳಿಕ ಸಮಸ್ಯೆಗಳು ಎದುರಾಗಿದೆ. ಸಾಲ ಮರುಪಾವತಿ ಸಾಧ್ಯವಾಗಿಲ್ಲ, ಹಾಗೆಂದು ಕಳೆದ ನಲವತ್ತು ವರ್ಷಗಳಿಂದ ಬಡ್ಡಿ ಕಟ್ಟುತ್ತಾ ಬಂದ ಮಲ್ಯರನ್ನು ಒಮ್ಮೆ ಸಾಲ ತೀರಿಸಿಲ್ಲ ಎಂಬ ನೆಪವೊಡ್ಡಿ ಏಕಾಏಕಿ ಅವರನ್ನು "ವಂಚಕ" ಎನ್ನುತ್ತೀರಾ? ಇದು ತಪ್ಪು ಎಂದು ಗಡ್ಕರಿ ಅಭಿಪ್ರಾಯಪಟ್ಟರು.
ನೀರವ್ ಮೋದಿ ಅಥವಾ ಮಲ್ಯ ಯಾರೇ ವಂಚನೆ ಎಸಗಿದರೆ ಅವರನ್ನು ಜೈಲಿಗೆ ಕಳಿಸುವುದು ಸರಿ, ಆದರೆ ಆರ್ಥಿಕ ಮುಗ್ಗಟ್ಟಿನಲ್ಲಿರುವವರನ್ನು ವಂಚಕರು ಎಂದೆನ್ನುವುದು ಸರಿಯಲ್ಲ. ಹಾಗೆ ಮಾಡಿದರೆ ಆರ್ಥಿಕತೆ ಅಭಿವೃದ್ದಿ ಸಾಧ್ಯವಾಗದು ಎಂದು ಅವರು ಹೇಳಿದರು. ಮುಂಬೈ ನಲ್ಲಿ ನಡೆದ ಸಮಾರಂಭವೊಂದರಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ.
ಭಾರತದ ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಗಡ್ಕರಿ ಭಾರತದಲ್ಲಿ ಬ್ಯಾಂಕುಗಳು ಕಷ್ಟದಲ್ಲಿರುವ ಸಂಸ್ಥೆಗಳಿಗೆ ನೆರವು ನೀಡಲಾರವು. ಬ್ಯಾಂಕಿಂಗ್ ಅಥವಾ ವಿಮಾ ಕ್ಷೇತ್ರದಲ್ಲಿ ಲಾಭ, ನಷ್ಟಗಳಿದ್ದೇ ಇರುತ್ತದೆ. ಆದರೆ ಅಂತಹ ವೇಳೆ ಎರಡನೇ ಬಾರಿ ಅವಕಾಶ ಕೊಟ್ಟು ನೋಡಬೇಕು ಎಂದು ಅವರು ಹೇಳಿದ್ದಾರೆ.
ಭಾರತೀಯ ಬ್ಯಾಂಕುಗಳಲ್ಲಿ ಒಂಬತ್ತು ಸಾವಿರ ಕೋಟಿ ಸಾಲ ಮಾಡಿ ವಿದೇಶಕ್ಕೆ ಪಲಾಯನವಾಗಿರುವ ವಿಜಯ್ ಮಲ್ಯರನ್ನು ಭಾರತಕ್ಕೆ ಕರೆತರುವ ಕೇಂದ್ರ ಸರ್ಕಾರದ ಪ್ರಯತ್ನದ ಬೆನ್ನಿಗೇ ಗಡ್ಕರಿ ಮಲ್ಯ ಸಮರ್ಥನೆ ಮಾಡಿಕೊಂಡಿರುವುದು ಅಚ್ಚರಿ ತರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com