
ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರಿಗೆ ನೀಡಲಾಗಿರುವ ಭಾರತ ರತ್ನ ಪ್ರಶಸ್ತಿ ವಾಪಾಸ್ ಪಡೆಯಲು ದೆಹಲಿ ಆಸೆಂಬ್ಲಿಯಲ್ಲಿ ನಿರ್ಣಯ ಅಂಗೀಕರಿಸುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ರಾಜೀವ್ ಗಾಂಧಿ ಭಾರತ ರತ್ನ ವಾಪಾಸ್ ನಿರ್ಣಯವನ್ನು ಬೆಂಬಲಿಸುವಂತೆ ನನ್ನ ಮೇಲೆ ಒತ್ತಡ ಹೇರಲಾಗಿತ್ತು. ಆದರೆ ನಿರ್ಣಯವನ್ನು ನಾನು ಬೆಂಬಲಿಸಲಿಲ್ಲ ಎಂದು ಆಪ್ ಶಾಸಕಿ ಅಲ್ಕಾ ಲಾಂಬ ಹೇಳಿದ್ದಾರೆ.
ಈ ಮಧ್ಯೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದೆಹಲಿ ಉಪ ಮುಖ್ಯಮಂತ್ರಿ ಮನಿಷ್ ಸಿಸೋಡಿಯಾ, ರಾಜೀವ್ ಗಾಂಧಿಗೆ ನೀಡಲಾಗಿರುವ ಭಾರತ ರತ್ನ ಪ್ರಶಸ್ತಿ ವಾಪಾಸ್ ಪಡೆಯುವ ಯಾವುದೇ ನಿರ್ಣಯವನ್ನು ಕೈಗೊಂಡಿಲ್ಲ. ಅಂತಹ ಅಲೋಚನೆಯೂ ನಮ್ಮಗಿಲ್ಲ ಎಂದು ಹೇಳಿದ್ದಾರೆ.
ಯಾವುದೇ ನಿರ್ಣಯ ಅಂಗೀಕಾರವಾಗಬೇಕಾದರೆ ಅದನ್ನು ಮೊದಲು ಸ್ಪೀಕರ್ ಮುಂದಿಡಬೇಕಾಗುತ್ತದೆ. ನಂತರ ಸದನದ ಮುಂದಿಟ್ಟು, ಶಾಸಕರಿಂದ ಒಪ್ಪಿಗೆ ಪಡೆದುಕೊಳ್ಳಬೇಕಾಗುತ್ತದೆ ಎಂದು ಎಎಪಿ ವಕ್ತಾರ ಸೌರಭ್ ಭಾರದ್ವಾಜ್ ಹೇಳಿದ್ದಾರೆ.
ಎಎಪಿ ಶಾಸಕ ಸೋಮನಾಥ್ ಭಾರತಿ, ರಾಜೀವ್ ಗಾಂಧಿಗೆ ನೀಡಲಾಗಿರುವ ಭಾರತ ರತ್ನ ಪ್ರಶಸ್ತಿ ವಾಪಾಸ್ ಪಡೆಯುವ ನಿರ್ಣಯದ ಪ್ರತಿಯನ್ನು ತಾವೇ ಕೈಯಿಂದ ಬರೆದು ಜರ್ನೈಲ್ ಸಿಂಗ್ ಅವರಿಗೆ ನೀಡಿದ್ದಾರೆ. ನಂತರ ಅವರು ಅದನ್ನು ಓದಿದ್ದಾರೆ ಮೂಲಗಳಿಂದ ತಿಳಿದುಬಂದಿದೆ.
ದೆಹಲಿ ಆಸೆಂಬ್ಲಿಯಲ್ಲಿ ಮಂಡಿಸಲಾದ ನಿರ್ಣಯದಲ್ಲಿ ಗಾಂಧಿ ಹೆಸರು ಉಲ್ಲೇಖವಿರಲಿಲ್ಲ. ಆದರೆ , ಅದನ್ನು ತಿಲಕ್ ನಗರ ಶಾಸಕ ಜರ್ನೈಲ್ ಸಿಂಗ್ ತಮ್ಮ ಭಾಷಣದಲ್ಲಿ ತಿಳಿಸಿದರು ಎಂದು ಸ್ಪೀಕರ್ ಹೇಳಿಕೆ ನೀಡಿದ್ದಾರೆ.
ಇಂತಹ ಒಂದು ದುರದೃಷ್ಟಕರ ಠರಾವನ್ನು ಕೈಗೊಂಡಿರುವ ಆಪ್, ಬಿಜೆಪಿಯ ಬಿ ಟೀಮ್ ಆಗಿದೆ. ಆಪ್ ನ ನೈಜ ಬಣ್ಣ ಈಗ ಬಯಲಾಗಿದೆ ಎಂದು ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಹೇಳಿದ್ದಾರೆ.
ಆದಾಗ್ಯೂ, ಎಎಪಿ ಕಾಂಗ್ರೆಸ್ ನಿರ್ದೇಶಿಸಿದಂತೆ ಕಾರ್ಯನಿರ್ವಹಿಸುತ್ತದೆ ಎಂದು ಬಿಜೆಪಿ ಶಾಸಕ ಹಾಗೂ ಪ್ರತಿಪಕ್ಷ ನಾ.ಕ ವಿಜಯೇಂದ್ರ ಗುಪ್ತಾ ಹೇಳಿದ್ದಾರೆ.
Advertisement