ನಮಗೆ ರಾಫೆಲ್‌ ಯುದ್ಧ ವಿಮಾನ ತಯಾರಿಸುವ ಸಾಮರ್ಥ್ಯವಿದೆ: ಎಚ್‌ಎಎಲ್‌ ಮುಖ್ಯಸ್ಥ

ಹಿಂದೂಸ್ತಾನ ಏರೊನಾಟಿಕ್ಸ್‌ ಲಿಮಿಟೆಡ್‌(ಎಚ್‌ಎಎಲ್‌)ಗೆ ರಾಫೆಲ್‌ ಯುದ್ಧ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಇದೆ....
ರಾಫೆಲ್ ಯುದ್ಧ ವಿಮಾನ
ರಾಫೆಲ್ ಯುದ್ಧ ವಿಮಾನ
ಉದಯ್‌ಪುರ: ಹಿಂದೂಸ್ತಾನ ಏರೊನಾಟಿಕ್ಸ್‌ ಲಿಮಿಟೆಡ್‌(ಎಚ್‌ಎಎಲ್‌)ಗೆ ರಾಫೆಲ್‌ ಯುದ್ಧ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಇದೆ ಎಂದು ಎಚ್ಎಎಲ್  ಮುಖ್ಯಸ್ಥ ಆರ್‌ ಮಾಧವನ್‌ ಅವರು ಶನಿವಾರ ಹೇಳಿದ್ದಾರೆ.
ಇಂದು ಉದಯ್ ಪುರದಲ್ಲಿ ನಡೆದ ಇಂಜಿನಿಯರ್ಸ್ ಸಮ್ಮೇಳನದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಧವನ್ ಅವರು, ಎಚ್ಎಎಲ್  ಗೆ ರಾಫೆಲ್ ಯುದ್ಧ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಇದೆ. ಆದರೆ ಶೀಘ್ರ ಡೆಲಿವೆರಿ ಪಡೆಯುವ ಉದ್ದೇಶದಿಂದ ಸರ್ಕಾರ ಬೇರೆ ಕಡೆ ಖರೀದಿಸಿದೆ ಎಂದಿದ್ದಾರೆ.
ಒಂದು ವೇಳೆ ಮುಂಚಿನ ಒಪ್ಪಂದದಂತೆ 126 ವಿಮಾನಗಳನ್ನು ಖರೀದಿಸುವುದೇ ಆಗಿದ್ದರೆ ಒಂದಷ್ಟು ವಿಮಾನಗಳನ್ನು ಹೊರಗಿಂದ ಮತ್ತು ಕೆಲವು ವಿಮಾನಗಳನ್ನು ರಾಷ್ಟ್ರದಲ್ಲೇ ತಯಾರಿಸಬಹುದಿತ್ತು. ಆದರೆ ಈಗ 36 ವಿಮಾನಗಳನ್ನು ಬೇರೆ ಕಡೆ ಖರೀದಿಸಿದ್ದಾರೆ. ಈಗ ರಾಫೆಲ್ ಯುದ್ಧ ವಿಮಾನವನ್ನು ನಾವು ನಿರ್ಮಿಸುವ ಪ್ರಶ್ನೆಯೇ ಬರುವುದಿಲ್ಲ ಎಂದಿದ್ದಾರೆ.
ತಂತ್ರಜ್ಞಾನದ ವರ್ಗಾವಣೆ ಪ್ರಶ್ನೆಯು ಕೇವಲ 36 ವಿಮಾನಗಳ ಪ್ರಸಕ್ತ ಕ್ರಮದಲ್ಲಿ ಉದ್ಭವಿಸುವುದಿಲ್ಲ ಎಂದು ಮಾಧವನ್‌ ಹೇಳುವ ಮೂಲಕ ರಫೆಲ್‌ ಯುದ್ಧ ವಿಮಾನ ತಯಾರಿಕೆ ವಿಚಾರದಲ್ಲಿ ಎಚ್‌ಎಎಲ್‌ ಮೂಗು ತೂರಿಸುವುದಿಲ್ಲ ಎಂಬ ಸಂದೇಶ ನೀಡಿದ್ದಾರೆ. 
ನರೇಂದ್ರ ಮೋದಿ ಸರ್ಕಾರ ಫ್ರೆಂಚ್‌ ಕಂಪನಿ ಡಸಾಲ್ಟ್‌ ಏವಿಯೇಷನ್‌ನಿಂದ ಹೆಚ್ಚಿನ ಮೊತ್ತಕ್ಕೆ ಯುದ್ಧ ವಿಮಾನಗಳನ್ನು ಖರೀದಿಸುತ್ತಿದೆ. ಅಂದಿನ ಯುಪಿಎ ಸರಕಾರ ಯೋಜಿಸಿದ್ದ 126 ಯುದ್ಧ ವಿಮಾನಗಳ ಖರೀದಿ ಯೋಜನೆಯನ್ನು ಕಡೆಗಣಿಸಿದೆ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ.
ಸರಕಾರಿ ಸ್ವಾಮ್ಯದ ಎಚ್‌ಎಎಲ್‌ ಕಂಪನಿಯನ್ನು ಅವಗಣಿಸಿದೆ ಎಂದಿರುವ ಕಾಂಗ್ರೆಸ್‌ ಯುದ್ಧ ವಿಮಾನಗಳ ತಯಾರಿಕೆಯ ಕೆಲವು ತಂತ್ರಜ್ಞಾನಗಳನ್ನು ಎಚ್‌ಎಎಲ್‌ಗೆ ವರ್ಗಾಯಿಸಬೇಕು ಎಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com