ಅಲಿಗಢ: ಇದು ಕಾಲ್ಪನಿಕ ಕಥೆಯಲ್ಲ. ನಿಜ ಜೀವನದಲ್ಲಿ ನಡೆದ ಕಥೆ. 2013ರ ಕೇದಾರಾನಾಥ ಪ್ರವಾಹದಲ್ಲಿ ಕಳೆದು ಹೋಗಿದ್ದ 17 ವರ್ಷದ ಬಾಲಕಿಯೊಬ್ಬಳು ಐದು ವರ್ಷಗಳ ನಂತರ ಮತ್ತೆ ಅಲಿಗಢದ ತನ್ನ ಕುಟುಂಬ ಸೇರಿಕೊಂಡಿದ್ದಾಳೆ.
ತಮ್ಮ ಕಳೆದು ಹೋದ ಮೊಮ್ಮಗಳು ಚಂಚಲಾ ವಾಪಸ್ ಮನೆಗೆ ಬಂದಿರುವುದು ನಿಜಕ್ಕೂ ಪವಾಡವೇ ಸರಿ ಎಂದು ಆಕೆಯ ಅಜ್ಜ ಹರೀಶ್ ಚಾಂದ್ ಮತ್ತು ಅಜ್ಜಿ ಶಕುಂತಲಾ ದೇವಿ ಹೇಳಿದ್ದಾರೆ.
ಚಂಚಲಾ 2013ರಲ್ಲಿ ತನ್ನ ಪೋಷಕರೊಂದಿಗೆ ಕೇದಾರಾನಾಥ ಯಾತ್ರೆಗೆ ತೆರಳಿದ್ದಳು. ಈ ವೇಳೆ ಸಂಭವಿಸಿದ ಪ್ರವಾಹದಲ್ಲಿ ಸಿಲುಕಿ ಆಕೆಯ ತಂದೆ ಮೃತಪಟ್ಟಿದ್ದರು. ಆದರೆ ಆಕೆಯ ತಾಯಿ ವಾಪಸ್ ಮನೆ ಬಂದಿದ್ದರು. ಚಂಚಲಾ ಬಂದಿರಲಿಲ್ಲ ಎಂದು ಹರೀಶ್ ಚಾಂದ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಯಾತ್ರೆಗೆ ತೆರಳಿದ್ದ ವೇಳೆ 12 ವರ್ಷದ ಚಂಚಲಾ ಸಹ ಮೃತಪಟ್ಟಿರಬಹುದು ಎಂದು ನಂಬಲಾಗಿತ್ತು. ಆದರೆ ಪ್ರವಾಹದಲ್ಲಿ ಬದುಕುಳಿದ ಆಕೆಯನ್ನು ಯಾರೋ ಜಮ್ಮುವಿನ ಅನಾಥ ಆಶ್ರಮಕ್ಕೆ ಸೇರಿಸಿದ್ದರು ಎಂದು ಬಾಲಕಿಯನ್ನು ಪೋಷಕರ ಮನೆ ಸೇರಿಸಲು ಸಹಾಯ ಮಾಡಿದ ಎನ್ ಜಿಒ ನಿರ್ದೇಶಕ ಜ್ಞಾನೇಂದ್ರ ಮಿಶ್ರಾ ಅವರು ಹೇಳಿದ್ದಾರೆ.