2018 ಹಿನ್ನೋಟ: ಮಹತ್ವದ ತೀರ್ಪು, ವಿವಾದಗಳಿಂದ ಸದ್ದು ಮಾಡಿದ ಸುಪ್ರೀಂ ಕೋರ್ಟ್

ಭಾರತ ನ್ಯಾಯಾಂಗ ವ್ಯ್ವಸ್ಥೆಯ ಸರ್ವೋಚ್ಚ ಕೇಂದ್ರವಾದ ಸುಪ್ರೀಂ ಕೋರ್ಟ್ (ಸರ್ವೋಚ್ಚ ನ್ಯಾಯಾಲಯ) ಈ ವರ್ಷ ತನ್ನ ಹಲವಾರು ಮಹತ್ವದ ತೀರ್ಪುಗಳು ಹಾಗೂ ನ್ನ್ಯಾಯಾಧೀಶರ ನೇಮಕಾತಿ ಸಂಬಂಧದ ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಭಾರತ ನ್ಯಾಯಾಂಗ ವ್ಯ್ವಸ್ಥೆಯ ಸರ್ವೋಚ್ಚ ಕೇಂದ್ರವಾದ ಸುಪ್ರೀಂ ಕೋರ್ಟ್ (ಸರ್ವೋಚ್ಚ ನ್ಯಾಯಾಲಯ) ಈ ವರ್ಷ ತನ್ನ ಹಲವಾರು ಮಹತ್ವದ ತೀರ್ಪುಗಳು ಹಾಗೂ ನ್ನ್ಯಾಯಾಧೀಶರ ನೇಮಕಾತಿ ಸಂಬಂಧದ ವಿವಾದಗಳಿಂದ ಸುದ್ದಿಯಾಗಿತ್ತು. 2018ನೇ ಇನ್ನೇನು ಮುಗಿಯುತ್ತಿರುವ ಈ ವೇಳೆಯಲ್ಲಿ ಭಾರತದ ಸುಪ್ರೀಂ ಕೋರ್ಟ್ ಈ ವರ್ಷ ಏನೇನು ಮಹತ್ವದ ತೀರ್ಪು ಪ್ರಕಟಿಸಿದೆ, ಯಾವುದೆಲ್ಲಾ ಕಾರಣಕ್ಕೆ ಸುದ್ದಿಯಾಗಿದೆ ಎನ್ನುವತ್ತ ಒಮ್ಮೆ ದೃಷ್ಟಿ ಹಾಯಿಸೋಣ.
ಹಾದಿಯಾಗೆ  'ಸ್ವಾತಂತ್ರ್ಯ'
ಕೇರಳದ ಹಿಂದೂ ಕುಟುಂಬದಲ್ಲಿ ಜನಿಸಿದ 25 ವರ್ಷದ ಅಖಿಲಾ ಅಶೋಕನ್, 2016ರಲ್ಲಿ ಜಹನ್ ಎಂಬ ಮುಸ್ಲಿಂ ಯುವಕನನ್ನು ಮದುವೆಯಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಳು. ಹಾದಿಯಾಳ ತಂದೆ ಕೆ.ಎಂ.ಅಶೋಕನ್, ತನ್ನ ಮಗಳು ಲವ್ ಜಿಹಾದ್ ಗೆ ಬಲಿಯಾದಳು ಎಂದು ಆರೋಪಿಸಿ ಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಅಂತಿಮವಾಗಿ ಈ ವರ್ಷ ಮಾರ್ಚ್ ವೇಳೆಗೆ ತೀರ್ಪು ನೀಡಿದ್ದ ಸುರಪ್ರೀಂ ಪತಿಯ ಜೊತೆ ಜೀವನ ಸಾಗಿಸಲು ಹಾದಿಯಾಗೆ 'ಸ್ವಾತಂತ್ರ್ಯ' ನೀಡಿತ್ತು.
ದಯಾಮರಣಕ್ಕೆ ಕಾನೂನು ಮಾನ್ಯತೆ
ಬಹುಕಾಲದಿಂದ ತೀವ್ರ ಚರ್ಚೆ ಹಾಗೂ ಪರ-ವಿರೋಧ ಅಭಿಪ್ರಾಯಕ್ಕೆ ಕಾರಣವಾಗಿದ್ದ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಈ ಮೂಲಕ ಐತಿಹಾಸಿಕ ತೀರ್ಪು ಪ್ರಕಟಿಸಿದ್ದ ನ್ಯಾಯಾಲಯ ನಿಷ್ಕ್ರಿಯ ಅಥವಾ ಪರೋಕ್ಷ ದಯಾ ಮರಣ (ಪ್ಯಾಸಿವ್ ಯುಥನೇಸಿಯಾ)ಕ್ಕೆ ಖಾನೂನಿನ ಸಮ್ಮತಿ ನೀಡಿತ್ತು. ಮಾರ್ಚ್  10ರಂದು ಕೋರ್ಟ್ ಈ ಮಹತ್ವದ ತೀರ್ಪ್ಪು ಓದಿತ್ತು.
ಮಾನವರಿಗೆ ಘನತೆಯಿಂದ ಸಾಯುವ ಹಕ್ಕು ಇದೆ ಎಂದು ಪ್ರತಿಪಾದಿಸಿದ್ದ ನ್ಯಾಯಾಲಯ  ವೈದ್ಯಕೀಯ ಮಂಡಳಿ ಹಾಗೂ ಹೈಕೋರ್ಟ್ ಅನುಮತಿಯ ಬಳಿಕ ವ್ಯಕ್ತಿಯೊಬ್ಬನಿಗೆ ದಯಾಮರಣ ಕರುಣಿಸಬಹುದು ಎಂದಿತ್ತು.
ಅತ್ಯಾಚಾರ ಸಂತ್ರಸ್ಥರ ಗುರುತು ಬಹಿರಂಗವಿಲ್ಲ
ಅತ್ಯಾಚಾರಕ್ಕೆ ಒಳಗಾದವರ್ ಗುರುತನ್ನು ಬಹಿರಂಗಪಡಿಸಬಾರದು, ಅಪ್ರಾಪ್ತ ಸಂತ್ರಸ್ತೆಯ ತಿದ್ದಿದ ಚಿತ್ರಗಳನ್ನು  ಸಹ ಮಾದ್ಯಮಗಳಲ್ಲಿ ಪ್ರಕಟಿಸಬಾರದು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿತ್ತು.ಸಂತ್ರಸ್ತೆಯ ಗೌಪ್ಯತೆಯನ್ನು ರಕ್ಷಿಸುವುದಕ್ಕಾಗಿ ಆಕೆ ಒಂದೊಮ್ಮೆ ಮರಣಿಸಿದ್ದರೂ ಸಹ ಅವಳ ಗುರುತು ಬಹಿರಂಗಪಡಿಸಬಾರದು ಎಂದು ಕೋರ್ಟ್ ಸೂಚಿಸಿತ್ತು. ಬಿಹಾರದ ಆಶ್ರಯ ಮನೆ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಾಲಯ ಈ ತ್ಪು ನೀಡಿತ್ತು.
ನಿರ್ಭಯಾ ಆರೋಪಿಗಳಿಗೆ ಗಲ್ಲು
ದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣ ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನು ಕಾಯಂಗೊಳಿಸಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ಪ್ರಕಟಿಸಿತ್ತು. ಜುಲೈ 10ರಂದು ಈ ಐತಿಹಾಸಿಕ ತೀರ್ಪು ಪ್ರಕಟಿಸಿದ್ದ ನ್ಯಾಯಾಲಯ  2012ರಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲಾ ಆರೋಪಿಗಳಿಗೆ ಗಲ್ಲು ಶಿಕ್ಷೆ ಖಾಯಂ ಗೊಳಿಸಿತ್ತು.
ಜಾತಿ ನಿಂದನೆ ಕಾಯ್ದೆಗೆ ಕಡಿವಾಣ
ಈ ವರ್ಷ ಸುಪ್ರೀಂ ಕೋರ್ಟ್ ಒಂದೆಡೆ ಎಸ್ಸಿ ಎಸ್ಟಿ ಬಡ್ತಿ ಮೀಸಲಾತಿಗಳನ್ನು ರದ್ದು ಪಡಿಸಿದ್ದರೆ ಇನ್ನೊಂದೆ ಪ. ಜಾತಿ, ಪ.ಪಂಗಡ ವ್ಯಕ್ತಿಗಳ ದೌರ್ಜನ್ಯ ತಡೆ ಕಾಯ್ದೆ ಅಡಿ ಯಾವುದೇ ಸರ್ಕಾರಿ ನೌಕರು ಅಥವಾ ವ್ಯಕ್ತಿಗಳ ವಿರುದ್ಧ ದೂರು ದಾಖಲಾದರೆ ಅವರನ್ನು ತಕ್ಷಣ ಬಂಧಿಸುವಂತಿಲ್ಲ ಎಂಬ ಮಹತ್ವದ ತೀರ್ಪು ನೀಡಿತ್ತು. ಕಾಯ್ದೆಯಡಿ ಯಾರನ್ನೇ ಬಂಧಿಸುವ ಮುನ್ನ ಪ್ರಕರಣದ ಬಗ್ಗೆ ಡಿವೈಎಸ್ಪಿ ಅಥವಾ ಅದಕ್ಕೂ  ಮೇಲ್ದರ್ಜೆಯ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿ ಒಪ್ಪಿಗೆ ನೀಡುವುದನ್ನು ಕಡ್ಡಾಯಗೊಳಿಸಿತ್ತು.ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ದುರುಪಯೋಗ ಹೆಚ್ಚುತಿದೆ ಎಂಬ ದೂರು ಪರಿಗಣಿಸಿ ನ್ಯಾಯಾಲಯ ಈ ನಿರ್ದೇಶನ ನೀಡಿತ್ತು.
'ಕರ್ನಾಟಕ ಮೂಲ'ದ ಮಾನದಂಡ ರದ್ದು
ಸರ್ಕಾರಿ ಕೋಟಾದಡಿ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ (ಪಿಜಿ ಕೋರ್ಸ್) ಪ್ರವೇಶಕ್ಕಾಗಿ ರಾಜ್ಯ ಸರ್ಕಾರ ರೂಪಿಸಿದ್ದ "ಕರ್ನಾಟಕ ಮೂಲ"ದ ಮಾನದಂಡವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿ ತೀರ್ಪು ನೀಡಿತ್ತು. ಮಾರ್ಚ್ ಹತ್ತರಂದು ಸರ್ಕಾರ ಹೊರಡಿಸಿದ್ದ ಅಧಿಸೂಚನೆಯಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಪಿಜಿ ಕೋರ್ಸ್ ಪ್ರವೇಶಕ್ಕೆ ನೀಡಿದ್ದ ಮಾನದಂಡಗಳನ್ನು ಮಾರ್ಪಡಿಸಬೇಕು. ಪ್ರವೇಶ ಪ್ರಕಟಣೆ ಕುರಿತು ಮರು ಪ್ರಕಟಣೆ ಹೊರಡಿಸಬೇಕು ಎಂದು ಕೋರ್ಟ್ ಸೂಚಿಸಿತ್ತು.
ಕಾವೇರಿ ಅಂತಿಮ ತೀರ್ಪು
ಕರ್ನಾಟಕದ ಪಾಲಿಗೆ ಅತ್ಯಂತ ಮಹತ್ವದ ತೀರ್ಪುಗಳಾದ ಕಾವೇರಿ ನದಿ ನೀರು ಹಂಚಿಕೆ ಕುರಿತು ಸುಪ್ರೀಂ ಕೋರ್ಟ್ ಈ ವರ್ಷ ಅತ್ಯಂತ ಮುಖ್ಯವಾದ ತೀರ್ಪು ಪ್ರಕಟಿಸಿತ್ತು. ಕಾವೇರಿ ವಿವಾದ ಕುರಿತು ಅಂತಿಮ ತೀರ್ಪು ನೀಡಿದ್ದ ಕೋರ್ಟ್ ರಾಜ್ಯಕ್ಕೆ 14.75 ಟಿಎಂಸಿ ಅಡಿ ನೀರನ್ನು ಹೆಚ್ಚುವರಿಯಾಗಿ ಹಂಚಿಕೆ ಮಾಡಿದೆ. ಕೇರಳ ಬಳಸದ ಕನಿಷ್ಟ ೧೫ ಟಿಎಂಸಿ ಅಡಿ ನೀರನ್ನು ರಾಜ್ಯ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಬ್ರಿಟೀಷ್ ಸರ್ಕಾರ ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಎಸಗಿದ್ದ ನ್ಯಾಯವನ್ನು ಕಾವೇರಿ ನ್ಯಾಯಮಂಡಳಿ ಸಹ ಮುಂದುವರಿಸಿತ್ತು ಎನ್ನುವ ನೋವನ್ನು ಈ ತೀರ್ಪು ತುಸು ಶಮನಗೊಳಿಸಿದೆ.
ಸಲಿಂಗ ಕಾಮ ಅಪರಾಧವಲ್ಲ
ಸಮ್ಮತಿಯ ಸಲಿಂಗಕಾಮವನ್ನು ಅಪರಾಧ ಎಂದು ಸಾರುವ 158 ವರ್ಷದಷ್ಟು ಹಳೆಯದಾದ ಐಪಿಸಿ ಸೆಕ್ಷನ್‌ 377ನ್ನು ವಜಾಗೊಳಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿತ್ತು. ಸೆಪ್ಟೆಂಬರ್ 6ರಂದು ನ್ಯಾಯಾಲಯ ಈ ಐತಿಹಾಸಿಕ ತೀರ್ಪು ನೀಡಿತ್ತು. ಐಪಿಸಿ ಸೆಕ್ಷನ್‌ 377ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿ ಶತಮಾನಗಳಿಂದ ಭಾರೀ ಚರ್ಚೆಗೆ, ಪ್ರತಿಭಟನೆಗೆ, ಅಪಹಾಸ್ಯಕ್ಕೆ, ಅಸಹ್ಯಕ್ಕೆ ಈಡಾಗಿದ್ದ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ಅನ್ನು ತೆಗೆದು ಹಾಕಿತ್ತು.
ಸೆಕ್ಷನ್ 377, ಸಂವಿಧಾನದ ಮೂಲಭೂತ ಹಕ್ಕು ನೀಡುವ ಅನುಚ್ಛೇದ 14ಕ್ಕೆ ವಿರುದ್ಧವಾಗಿದೆ. ಈಗ ಈ ಸೆಕ್ಷನ್ ಅನ್ನು ಅಳಿಸಿ ಹಾಕಲಾಗಿದ್ದು ಎಲ್‌ಜಿಪಿಟಿಕ್ಯೂ  ಸಮುದಾಯದ ಮೇಲೆ ನಡೆಯುತ್ತಿದ್ದ ತಾರತಮ್ಯ, ದಬ್ಬಾಳಿಕೆಗೆ ಕೊನೆ ಹಾಡಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.
ನಂಬಿ ನಾರಾಯಣ್ ಗೆ ಪರಿಹಾರ
ಇಸ್ರೋ ವಿಜ್ಞಾನಿಯ ಗೂಢಚಾರಿಕೆ ಪ್ರಕರಣದ ತೀರ್ಪು ಹೊರಬಂದಿದೆ. ಸುಪ್ರೀಂ ಕೋರ್ಟ್ ಇಸ್ರೋ ವಿಜ್ಞಾನಿ  ನಂಬಿ ನಾರಾಯಣ್ ಅವರಿಗೆ ರೂ. 50 ಲಕ್ಷ ಪರಿಹಾರ ನೀಡುವಂತೆ ಕೇರಳ ಸರ್ಕಾರಕ್ಕೆ ಸೂಚಿಸಿ ಮಹತ್ವದ ತೀರ್ಪು ನೀಡಿತ್ತು. ಇಸ್ರೋ ವಿಜ್ಞಾನಿ ಬಂಧನ  "ಅನಗತ್ಯ"  ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.
ಎಸ್ಸಿ ಎಸ್ಟಿ ಮೀಸಲು, ಬಡ್ತಿ ಅಗತ್ಯವಿಲ್ಲ
ಬಡ್ತಿ ನೀಡುವಾಗ ಮೀಸಲಾತಿ ಅಗತ್ಯವಿಲ್ಲ, ಎಸ್ಸಿ ಎಸ್ಟಿ ಹಾಗೂ ಒಬಿಸಿ ಅಭ್ಯರ್ಥಿಗಳ ದತ್ತಾಂಶ ಸಂಗ್ರಹಣೆ ಅಗತ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಈ ವರ್ಷ ಐತಿಹಾಸಿಕ ತೀರ್ಪು ಪ್ರಕಟಿಸಿತ್ತು. ಸರ್ಕಾರಿ ಉದ್ಯೋಗದ ಬಡ್ತಿಯಲ್ಲಿ ಮೀಸಲಾತಿ ಕುರಿತು 2006ರ ತೀರ್ಪು ಪುನರ್ ಪರಿಶೀಲನೆ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.ಬಡ್ತಿ ಮೀಸಲು ಪ್ರಮಾಣ ನಿರ್ಧಾರ ಆಯಾ ರಾಜ್ಯಗಳಿಗೆ ಬಿಟ್ಟ ವಿಚಾರ ಎಂದು ಕೋರ್ಟ್ ತೀರ್ಪು ನೀಡಿತ್ತು.ಇದರಿಂದ ಎಸ್ಸಿ ಎಸ್ಟಿ ಬಡ್ತಿ ಮೀಸಲಾತಿಗೆ ಸಂಬಂಧಿಸಿ ಹಲವು ದಿನಗಳಿಂದಿದ್ದ ಗೊಂದಲಕ್ಕೆ ತೆರೆ ಬಿದ್ದಿತ್ತು.
ಆಧಾರ್ ಗೆ ಸಾಂವಿಧಾನಿಕ ಮಾನ್ಯತೆ
ಸೆಫ್ಟೆಂಬರ್ 26ರಂದು ಭಾರತ ಸರ್ವೋಚ್ಚ ನ್ಯಾಯಾಲಯ ಮೂರು ಮಹತ್ವಪೂರ್ಣ ತೀರ್ಪು ಪ್ರಕಟಿಸಿತ್ತು. ಅದರಲ್ಲಿ ಆಧಾರ್ ಗೆ ಸಂವಿಧಾನಿಕ ಮಾನ್ಯತೆ ನೀಡಿದ ತೀರ್ಪು ಸಹ ಸೇರಿದೆ. ಆಧಾರ್ ಗೆ ಸಾವಿಧಾನಿಕ ಮಾನ್ಯತೆ ಎತ್ತಿ ಹಿಡಿದಿದ್ದ ಕೋರ್ಟ್ ಸರ್ಕಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯಗೊಳಿಸ್ತ್ತು. ಅಲ್ಲದೆ ಪ್ಯಾನ್ ಕಾರ್ಡ್ ನೊಡನೆ ಆಧಾರ್ ಜೋಡನೆಯನ್ನೂ ಸಹ ಕಡ್ಡಾಯಗೊಳಿಸಿ ತೀರ್ಪು ನೀಡಿತ್ತು.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಆಧಾರ್ ಕಡ್ಡಾಯಗೊಳಿಸಿದ್ದ ನ್ಯಾಯಾಲಯ ಬ್ಯಾಂಕ್ ಖಾತೆ ತೆರೆಯಲು, ಮೊಬೈಲ್ ಸಿಮ್ ಪಡೆಯಲು ಹಾಗೂ ಶಾಲಾ ಪ್ರವೇಶಕ್ಕಾಗಿ ಆಧಾರ್ ಕಡ್ಡಾಯವಲ್ಲ ಎಂದಿತ್ತು. ಅಲ್ಲದೆ ಖಾಸಗಿ ಸಂಸ್ಥೆಗಳಿಗೆ ಆಧಾರ್ ಕಡ್ಡಾಯವಿಲ್ಲ, ಮೊಬೈಲ್ ಸಂಖ್ಯೆಯನ್ನು ಆಧಾರ್ ಜತೆ ಸಮ್ಪರ್ಕಿಸುವುದು ಸಹ ಕಡ್ಡಾಯವಲ್ಲ ಎಂದು ಹೇಳಿತ್ತು. ಯುಜಿಸಿ, ನೀಟ್, ಸಿಬಿಎಸ್ ಇ ಪರೀಕ್ಷೆಗಳಿಗೆ ಸಹ ಆಧಾರ್ ಬೇಡ ಎಂದು ನ್ಯಾಯಾಲಯ ತಿಳಿಸಿತ್ತು.
ಕೋರ್ಟ್ ಕಲಾಪದ ನೇರ ಪ್ರಸಾರಕ್ಕೆ ಅಸ್ತು
ಸುಪ್ರೀಂ ಕೋರ್ಟ್ ನಲ್ಲಿ ನಡೆಯುವ ವಿಚಾರಣೆಗಳನ್ನು ನೇರಪ್ರಸಾರ ಮಾಡಲು ನ್ಯಾಯಾಲಯ ಸಮ್ಮತಿಸುವ ಮೂಲಕ ಈ ವರ್ಷ ಮಹತ್ವದ ತೀರ್ಪು ನೀಡಿತ್ತು. ನ್ಯಾಯಾಂಗದಲ್ಲಿ ಪಾರದರ್ಶಕತೆ ತರುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಡದ್ದಾಗಿ ನ್ಯಾಯಾಲಯ ಹೇಳಿದ್ದು ಮಹತ್ವದ ತೀರ್ಪುಗಳ ನೇರ ಪ್ರಸಾರಕ್ಕೆ ಕೋರ್ಟ್ ಸಮ್ಮತಿಸಿತ್ತು.
ಅಕ್ರಮ ಸಂಬಂಧ ಅಪರಾಧವಲ್ಲ
ಇನ್ನು ಈವರ್ಷ ಸುಪ್ರೀಂ ನೀಡಿದ್ದ ಮಹತ್ವದ ತೀರ್ಪುಗಳಲ್ಲಿ ವ್ಯಭಿಚಾರ ಅಪರಾಧವಲ್ಲ ಎನ್ನುವುದು ಸಹ ಒಂದು. ಸೆಪ್ಟೆಂಬರ್ 27ರಂದು ಸುಪ್ರೀಂ ಕೋರ್ಟ್ ಈ ಐತಿಹಾಸಿಕ ತೀರ್ಪು ನೀಡಿದ್ದು ಈ ಕುರಿತಾದ ಐಪಿಸಿ ಕಾನೂನನ್ನು ಅಸಂವಿಧಾನಿಕ ಎಂದಿತ್ತು. ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲಪತ್ನಿಗೆ ಪತಿಯೇ ಮಾಲಿಕನಲ್ಲ, ಮಹಿಳೆ-ಪುರುಷರು ಇಬ್ಬರು ಸಮಾನರು ಎಂದು ಹೇಳುವ ಮೂಲಕ ಐತಿಹಾಸಿಕ ತೀರ್ಪು ಪ್ರಕಟಿಸಿತ್ತು.
ಮಸೀದಿ ಇಸ್ಲಾಂ ಅಂಗವಲ್ಲ
ಮಸೀದಿಯು ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವಾಗಿಲ್ಲ ಎಂಬ 1994ರ ತೀರ್ಪನ್ನೇ ಸುಪ್ರೀಂ ಕೋರ್ಟ್ ಎತ್ತಿ ಹಿಡಿಯುವ ಮೂಲಕ ಆಯೋಧ್ಯೆ ರಾಮಮಂದಿರ ವಿವಾದವನ್ನು ವಿಸ್ತತ ಪೀಠಕ್ಕೆ ವರ್ಗಾವಣೆ ಮಾಡಲು ನಿರಾಕರಿಸಿತ್ತು. ಮಸೀದಿಯು ಇಸ್ಲಾಮ್‍ನ ಅವಿಭಾಜ್ಯ ಅಂಗವಾಗಿಲ್ಲ ಎಂದಿದ್ದ ಇಸ್ಮಾಯಿಲ್ ಫಾರೂಕಿ ಪ್ರಕರಣದ ತೀರ್ಪನ್ನು  ನ್ಯಾಯಾಲಯ ಮಾನ್ಯ ಮಾಡಿತ್ತು.ಸೆ.27ರಂದು ಈ ಮಹತ್ವದ ತೀರ್ಪು ಪ್ರಕಟವಾಗಿತ್ತು.
ಶಬರಿಮಲೆಗೆ ಮಹಿಳೆಯರ ಪ್ರವೇಶ ಓಕೆ
ಈ ವರ್ಷ ಸರ್ವೋಚ್ಚ ನ್ಯಾಯಾಲಯ ನೀಡಿದ್ದ ಮಹತ್ವದ ಐತಿಹ್ಹಾಸಿಕ ತೀರ್ಪುಗಳಲ್ಲಿ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ನೀಡಿದ್ದ ಅನುಮತಿ ಸಹ ಒಂದು. ಸೆಪ್ಟೆಂಬರ್ 28ರಂದು ನ್ಯಾಯಾಲಯ ಈ ತೀರ್ಪು ಪ್ರಕಟಿಸಿತ್ತು.ಕೇರಳದ ಪ್ರಸಿದ್ಧ ದೇವಾಲಯವಾದ ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ಕೋರ್ಟ್ ಸಮ್ಮತಿಸಿತ್ತು.
ದೇವಸ್ಥಾನದ ಆಡಳಿತ ಮಂಡಳಿಯ ನಿಯಮಾವಳಿ ಪ್ರಕಾರ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ದೇವಸ್ಥಾನದ ಆವರಣಕ್ಕೆ ಭೇಟಿ ನೀಡಲು ಅವಕಾಶವಿರಲಿಲ್ಲ. ಋತುಮತಿಯಾಗುವ ವಯಸ್ಸಿನ ಹೆಣ್ಣುಮಕ್ಕಳು ದೇವಾಲಯದ ಆವರಣಕ್ಕೆ ಪ್ರವೇಶಿಸಿದರೆ ಮಂದಿರದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ಆಡಳಿತ ಮಂಡಳಿ ವಾದವನ್ನು ಕೋರ್ಟ್ ತಳ್ಳಿ ಹಾಕಿತ್ತು. ಮಹಿಳೆಯರಿಗೆ ಪ್ರವೇಶ ನಿಷೇಧಿಸಿ ಅವರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಕುತ್ತು ತರಬಾರದು ಎಂದು ಕೋರ್ಟ್ ಹೇಳಿತ್ತು. ಈ ತೀರ್ಪಿಉನ ಬಳಿಕ ಕೇರಳ ಸೇರಿ ದೇಶಾದ್ಯಂತ ಅಪಾರ ಸಂಖ್ಯೆಯ ಅಯ್ಯಪ್ಪ ಭಕ್ತರು, ಹಿಂದೂ ಪರ ಸಂಘಟನೆಗಳು ದೇವಾಲಯಕ್ಕೆ ಮಹಿಳೆಯರ ಪ್ರಚ್ವೇಶ ವಿರೋಧಿಸಿ ಪ್ರತಿಭಟನೆ ನಡೆಸಿದ್ದವು.
ಪಟಾಕಿ ನಿಷೇಧ
ಈ ವರ್ಷದ ಸುಪ್ರೀಂ ಕೋರ್ಟ್ ಗಮನಾರ್ಹ ತೀರ್ಪುಗಳಲ್ಲಿ ಪಟಾಕಿ ನಿಷೇಧದ ತೀರ್ಪು ಸಹ ಒಂದು ಪಟಾಕಿ ನಿಷೇಧವನ್ನು ಸಂಪೂರ್ಣ ಜಾರಿಗೆ ಆದೇಶಿಸಲು ನಿರಾಕರಿಸಿದ ಕೋರ್ಟ್  ಪರವಾನಗಿ ಪಡೆದ ವ್ಯಾಪಾರಿಗಳ ಮೂಲಕ ದೇಶಾದ್ಯಂತ ಹಸಿರು ಪಟಾಕಿಗಳ ಮಾರಾಟಕ್ಕಷ್ಟೇ ಅನುಮತಿಸಿದೆ. ಜೋರಾಗಿ ಶಬ್ದಗಳನ್ನು ಮಾಡುವ ಹೆಚ್ಚಿನ ಪ್ರಮಾಣದ ವಿಷಾನಿಲ ಸೂಸುವ ಪಟಾಕಿಗಳನ್ನು ಕೋರ್ಟ್ ನಿಷೇಧಿಸಿದೆ. ಅಲ್ಲದೆ ಯಾವುದೇ ವ್ಯಕ್ತಿ ಪಟಾಕಿ ಹಚ್ಚುವುದಕ್ಕೆ ಸಮಯವನ್ನು ನಿಗದಿಪಡಿಸಿದ ಕೋರ್ಟ್  ದೀಪಾವಳಿ ಮತ್ತು ಧಾರ್ಮಿಕ ಆಚರಣೆಗಳ ಸಮಯದಲ್ಲಿ ರಾತ್ರಿ 8-10 ಗಂಟೆಗಳ ನಡುವೆ ಮಾತ್ರ ಪಟಾಕಿ ಸಿಡಿಸಲು ಅನುಮತಿ ನೀಡಿದೆ.ಹೊಸ ವರ್ಷದ ಸಂದರ್ಭದಲ್ಲಿ, ರಾತ್ರಿ 11.45 ರಿಂದ 12: 30 ರವರೆಗೆ ಅಷ್ಟೇ ಅಪ್ತಾಕಿ ಹಚ್ಚಲು ಕೋರ್ಟ್ ಸಮಯವನ್ನು ನಿಗದಿಪಡಿಸಿ ತೀರ್ಪು ಪ್ರಕಟಿಸಿದ್ದು ಇದೊಂದು ಐತಿಹಾಸಿಕ ಮಹತ್ವದ ತೀರ್ಪು ಎಂದು ಪರಿಗಣಿತವಾಗಿದೆ.
ರಾಫೆಲ್ ಕುರಿತು ತನಿಖೆ ಬೇಡ
ಭಾರತ ಹಾಗೂ ಫ್ರಾನ್ಸ್ ನಡುವೆ ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ನಡೆದಿದ್ದು ಈ ಖರೀಓದಿ ವ್ಯವಹಾರದಲ್ಲಿ ಅಕ್ರಮ ನಡೆದಿದೆ ಎಂದು ಆರೋ[ಪಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಈ ವರ್ಷ ಸುಪ್ರೀಂಮ್ ಕೋರ್ಟ್ ವಿಚಾರಣೆ ನಡೆಸಿತ್ತು.ದೇಶದಾದ್ಯಂತ ರಾಫೆಲ್ ಡೀಲ್, ರಾಫೆಲ್ ಹಗರಣ ಎಂದೇ ಹೆಸರಾಗಿದ್ದ ಈ ವಿವಾದವನ್ನು ಆಲಿಸಿದ ನ್ಯಾಯಾಲಯ ಡಿಸೆಂಬರ್ 14ರಂದು ತೀರ್ಪು ನೀಡಿ ಈ ಸಂಬಂಧ ಯಾವುದೇ ತನಿಖೆ ಅಗತ್ಯ ಇಲ್ಲ ಎಂದಿತ್ತು.ಈ ಮೂಲಕ ಕೇಂದ್ರ ಸರ್ಕಾರಕ್ಕೆ ದೊಡ್ಡ ರಿಲೀಫ್ ಒದಗಿಸಿತ್ತು.
ರಾಫೆಲ್​ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಸಲ್ಲಿಕೆಯಾಗಿದ್ದ ಎಲ್ಲ ಅರ್ಜಿಗಳನ್ನು ವಜಾ ಮಾಡಿದ್ದ ಸುಪ್ರೀಂ ಕೋರ್ಟ್ ​, ರಾಫೆಲ್​ ಡೀಲ್​ನಲ್ಲಿ ಯಾವುದೇ ಅನುಮಾನ ಕಂಡಿಲ್ಲ ಎಂದಿತ್ತು.
ಸುಪ್ರೀಂ ನ್ಯಾಯಮೂರ್ತಿಗಳ ಪತ್ರಿಕಾಗೋಷ್ಠಿ
ಸುಪ್ರೀಂ ಕೋರ್ಟಿನ ನಾಲ್ವರು ಹಿರಿಯ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ನಡುವಣ ಭಿನ್ನಾಭಿಪ್ರಾಯದ ಕಾರಣ ಸರ್ವೋಚ್ಚ ನ್ಯಾಯಾಲಯದ ನಾಲ್ವರು ನ್ಯಾಯಾಧೀಶರು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಸಿಜೆಐ ವಿರುದ್ಧ ತೀವ್ರ ಆರೋಪಗಳನ್ನು ಮಾಡಿದ್ದದ್ದು ಈ ವರ್ಷ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ನಾಲ್ವರು ಹಿರಿಯ ನ್ಯಾಯಾಧೀಶರಾದ ಜಸ್ಟಿಸ್‌ ಚಲಮೇಶ್ವರ್‌, ರಂಜನ್‌ ಗೊಗೋಯ್‌, ಮದನ್ ಬಿ ಲೋಕುರ್‌ ಮತ್ತು ಕುರಿಯನ್ ಜೋಸೆಫ್‌ ನ್ಯಾಯಾಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಗೆ ಸಾರ್ವಜನಿಕ ಪತ್ರಿಕಾಗೋಷ್ಠಿ ನಡೆಸಿ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ವಿರುದ್ಧ ಆರೋಪಗಳನ್ನು ಹೊರಿಸಿದ್ದರು. ಇದು ಪ್ರಜಾಪ್ರಭುತ್ವದ ಉಳಿವಿಗಾಗಿ  ಎಂದು ಅವರ ವಾದವಾಗಿತ್ತು.ಜನವರಿ 12ರಂದು ಈ ಐತಿಹಾಸಿಕ ಪತ್ರಿಕಾಗೋಷ್ಠಿ ನಡೆದಿತ್ತು.
ಸುಪ್ರೀಂ ಕೊಲಿಜಿಯಂ ಗಲಾಟೆ
ಉತ್ತರಾಖಂಡದ ಮುಖ್ಯನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಅವರನ್ನು ಸುಪ್ರೀಂ ನ್ಯಾಯಮೂರ್ತಿಗಳಾಗಿ ನೇಮಕ ಮಾಡಬೇಕೆಂಬ ವಿಚಾರದಲ್ಲಿ ಕೊಲಿಜಿಯಂಹಾಗೂ ಕೇಂದ್ರ ಸರ್ಕಾರದ ನಡುವೆ ತೀವ್ರ ಭಿನ್ನಾಭಿಪ್ರಾಯ ಏರ್ಪಟ್ಟಿದ್ದದ್ದು ಮಾದ್ಯಮದಲ್ಲಿ ಸಾಕಷ್ಟು ಸುದ್ದಿಗಳಿಗೆ ಗ್ರಾಸವಾಗಿತ್ತು. 
ಕೊಲಿಜಿಯಂ ಉತ್ತರಾಖಂಡ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರನ್ನು ಸುಪ್ರೀಂ  ಕೋರ್ಟ್ ನ್ಯಾಯಮೂರ್ತಿಯನ್ನಾಗಿ ಮಾಡಲು ಪಟ್ಟು ಹಿಡಿದಿದ್ದರೆ ಕೇಂದ್ರ ಸರ್ಕಾರ ಮಾತ್ರ ಕೊಲಿಜಿಯಂ ಶಿಫಾರಸನ್ನು ತಿರಸ್ಕರಿಸಿತ್ತು. ಆದರೆ ಅಂತಿಮವಾಗಿ ಆಗಸ್ಟ್ ಮೂರರಂದು ಕೊಲಿಜಿಯಂ ಶಿಪಾರಸನ್ನು ಅಂಗೀಕರಿಸಿದ ಕೇಂದ್ರ ಜೋಸೆಫ್ ಅವರ ಪದೋನ್ನತಿಗೆ ಸಮ್ಮತಿಸಿತ್ತು. ಅದರಂತೆ ಮದ್ರಾಸ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ, ಒಡಿಶಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿನೀತ ಸರಣ್ ಹಾಗೂ ಕೆ.ಎಂ. ಜೋಸೆಫ್ ಮೂವರೂ  ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು.
 ಕರ್ನಾಟಕ ಪಟ್ಟಕ್ಕಾಗಿ  ಮಧ್ಯರಾತ್ರಿ ಹೈಡ್ತ್ರಾಮ!
ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡುವ ವಿಚಾರ ಮಧ್ಯರಾತ್ರಿಯಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಲೇರಿತ್ತು. ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠದ ಮುಂದೆ ಕಾಂಗ್ರೆಸ್-ಜೆಡಿಎಸ್ ಪರವಾಗಿ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಮತ್ತು ಕೇಂದ್ರದ ಪರ ವಕೀಲ ತುಷಾರ್ ಮೆಹ್ತಾ ಹಾಗೂ ಬಿಜೆಪಿ ಪರ ಮುಕುಲ್ ರೋಹಟಗಿ ವಾದವನ್ನು ಮಂಡಿಸಿದ್ದರು. 
ಮೇ 16ರ ಮಧ್ಯರಾತ್ರಿ ಕೋರ್ಟ್ ಕಟಕಟೆ ಏರಿದ್ದ ಕರ್ನಾಟಕ ಜೆಡಿಎಸ್-ಕಾಂಗ್ರೆಸ್ ನಾಯಕರು ಚುನಾವಣೆ ಬಳಿಕ ಸರ್ಕಾರ ರಚಿಸಲು ಬಿಜೆಪಿಗೆ ಆಹ್ವಾನ ನೀಡಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರ ಕ್ರಮ ಪ್ರಶ್ನಿಸಿದ್ದರು  ಮಧ್ಯರಾತ್ರಿ 1.45ಕ್ಕೆ ಆರಂಭವಾಗಿದ್ದ ಕೋರ್ಟ್ ಕಲಾಪ ಈ ವರ್ಷ ಸುಪ್ರೀಂ ಕೋರ್ಟ್ ಕಂಡ ಐತಿಹಾಸಿಕ ಮಹತ್ವದ ಘಟನೆಗಳಲ್ಲಿ ಒಂದೆನ್ನಬೇಕು ನ್ಯಾಯಮೂರ್ತಿ ಎಕೆ ಸಿಕ್ರಿ, ಅಶೋಕ್ ಭೂಷಣ್ ಮತ್ತು ಬೋಬ್ಡೆ ಅವರನ್ನೊಳಗೊಂಡಿದ್ದ ತ್ರಿಸದಸ್ಯ ಪೀಠ ಕಾಂಗ್ರೆಸ್‌ ಹಾಗೂ ಜೆಡಿಎಸ್ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ರಾಜ್ಯಪಾಲರ ಕ್ರಮವನ್ನು ಸಮರ್ಥಿಸಿತ್ತು. 
ಕರ್ನಾಟಕ ರಾಜಕೀಯ ಇತಿಹಾಸದಲ್ಲಿಯೇ ಅತ್ಯಂತ ನಾಟಕೀಯ ಬೆಳವಣಿಗೆಗಳನ್ನು ಕಂಡ ದಿನ ಎಂದು ಇದನ್ನು ದಾಖಲಿಸಬಹುದಾಗಿದ್ದು ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರಕ್ಕೆ ಸುಪ್ರೀಂ ಕೋರ್ಟ್‌ ಗ್ರೀನ್ ಸಿಗ್ನಲ್‌ ನೀಡಿತ್ತು, ಆದರೆ ಇಷ್ಟೆಲ್ಲಾ ಹೈಡ್ರಾಮಗಳಾಗಿ ಬಳಿಕ ಪ್ರಮಾಣವಚನ ಸ್ವೀಕರಿಸಿದ್ದ ಯಡಿಯೂರಪ್ಪ ಅವರಿಗೆ ಸದನದಲ್ಲಿ ವಿಶ್ವಾಸಮತ ಸಾಬೀತು ಮಾಡಲಾಗದೆ ಹೋಗಿ ಅವರು ರಾಜೀನಾಮೆ ಸಲ್ಲಿಸಬೇಕಾಯಿತು. ಬಳಿಕ ಮತ್ತೆ ಸಮ್ಮಿಶ್ರ ಸರ್ಕಾರ ರಚನೆಯಾಗಿ ಮುಖ್ಯಮಂತ್ರಿಗಳಾಗಿ ಎಚ್.ಡಿ. ಕುಮಾರಸ್ವಾಮಿಧಿಕಾರಕ್ಕೇರಿದ್ದರು.
ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್​ ಗೊಗೊಯ್
ಸುಪ್ರೀಂಕೋರ್ಟ್​ನ 46ನೇ ಮುಖ್ಯನ್ಯಾಯಮೂರ್ತಿಯಾಗಿ ರಂಜನ್ ಗೊಗೊಯ್ ನೇಮಕ ಈ ವರ್ಷ ಸುಪ್ರೀಂ ಕೋರ್ಟ್ ನಲ್ಲಿ ನಡೆದ ಮಹತ್ವದ ವಿದ್ಯಮಾನಗಳಲ್ಲಿ ಒಂದು .ಸುಪ್ರೀಂ ಕೋರ್ಟ್​ನ ಎರಡನೇ ಹಿರಿಯ ನ್ಯಾಯಮೂರ್ತಿಯಾಗಿರುವ ಗೊಗೊಯ್​ ಅವರ ಹೆಸರನ್ನು ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಸಿಜೆಐ ದೀಪಕ್​ ಮಿಶ್ರಾ ಶಿಫಾರಸು ಮಾಡಿದ್ದರು.
ಇದುವರೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತೊಇಗಳಾಗಿದ್ದ ದೀಪಕ್ ಮಿಶ್ರಾ ಅಕ್ಟೋಬರ್​ 2 ನಿವೃತ್ತರಾಗಿದ್ದು  ಅಕ್ಟೋಬರ್​ 3 ರಂದು ಗೊಗೊಯ್​ ನೂತನ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಿದರು,. ಇವರು  2019ರ ನವೆಂಬರ್​ 17ರವರೆಗೆ ಈ ಹುದ್ದೆಯಲ್ಲಿರಲಿದ್ದಾರೆ. ಗುವಾಹಟಿ ಹೈಕೋರ್ಟ್​ಗೆ 2001ರಲ್ಲಿ ನ್ಯಾಯಮೂರ್ತಿಯಾಗಿ ನೇಮಕವಾದ ನ್ಯಾ.ಗೊಗೊಯ್, 2012ರಲ್ಲಿ ಸುಪ್ರೀಂ ಕೋರ್ಟ್​ಗೆ ಬಡ್ತಿ ಪಡೆದಿದ್ದರು
ಪರಿಹಾರ ಕಾಣದ ಅಯೋಧ್ಯೆ ವಿವಾದ
 ಈ ವರ್ಷ ಸುಪ್ರೀಂ ಕೋರ್ಟ್ ನಲ್ಲಿ ಅಯೋಧ್ಯೆ ವಿವಾದ ಸಮ್ಬಂಧ ವಿಚಾರಣೆ ಮುಂದುವರಿದಿತ್ತು, ಅಕ್ಟೋಬರ್ 29ರಿಂದ ನಿರಂತ ವಿಚಾರಣೆ ಪ್ರಾರಂಭವಾಗುವೆಂದು ನಿರ್ದೇಶನ ನೀಡಿದ್ದ ಸುಪ್ರೀಂ ಅಕ್ಟೋಬರ್ ನಲ್ಲಿ ಅಯೋಧ್ಯೆ ಕುರಿತ ಎಲ್ಲಾ ಅರ್ಜಿ ವಿಚಾರಣೆಗಳನ್ನು ಮುಂದಿನ ಜನವರಿ 4ಕ್ಕೆ ಮುಂದೂಡಿ ಆದೇಶಿಸಿದೆ.
ಇಷ್ಟೇ ಅಲ್ಲದೆ ಸುಪ್ರೀಂ ಈ ವರ್ಷದ ಅವಧಿಯಲ್ಲಿ ನೀಡಿದ್ದ ಇತರೆ ಕೆಲವು ಮಹತ್ವದ ತೀರ್ಪುಗಳ ಪಟ್ಟಿ ಹೀಗಿದೆ-
ಕಳಂಕಿತ ರಾಜಕಾರಣಿಗಳ ಅನರ್ಹತೆ ಸಂಸತ್ತಿಗೆ ಬಿಟ್ಟ ವಿಚಾರ,  ಶಾಸಕ, ಸಂಸದರ ಕ್ರಿಮಿನಲ್ ದಾವೆಗಳ ವಿಚಾರಣೆಗೆ ವಿಶೇಷ ಕೋರ್ಟ್ ಸ್ಥಾಪನೆ, ತಾಜ್ ಮಹಲ್ ವಫ್ತ್ ಆಸ್ತಿಯಲ್ಲ, ತಾಜ್ ಮಹಲ್ ಆವರಣದಲ್ಲಿ ಪ್ರಾರ್ಥನೆಗೆ ಅವಕಾಶವಿಲ್ಲ, ದೆಹಲಿ ಸರ್ಕಾರಕ್ಕೆ ಅಧಿಕಾರ ನೀಡಿಕೆ ವಿಚಾರ, ನಾಗರಹೊಳೆಯಲ್ಲಿ ರಾತ್ರಿ ಸಂಚಾರಕ್ಕೆ ನಿರ್ಬಂಧ, ಪ್ರಕರಣ ಹಂಚಿಕೆಗೆ ಸಿಜೆಐಗೆ ಅಧಿಕಾರ ನೀಡಿ ತೀರ್ಪು.
ಕಡೆಯದಾಗಿ ಮುಂದಿನ ವರ್ಷ ಸರ್ವೋಚ್ಚ ನ್ಯಾಯಾಲಯ ತನ್ನ ನ್ಯಾಯದಾನದ ಮುಖೇನ ಭಾರತದ ಪ್ರತಿಯೊಬ್ಬ ನಾಗರಿಕನೂ ಮೆಚ್ಚುವಂತೆ ಮಾಡಲಿದೆ ಎಂದು ಆಶಿಸೋಣ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com