2019 ಲೋಕಸಭೆ ಚುನಾವಣೆ: ದಲಿತ ಮತಗಳು ಕೈತಪ್ಪುವ ಆತಂಕದಲ್ಲಿ ಬಿಜೆಪಿ
ನವದೆಹಲಿ:2019ರ ಲೋಕಸಭಾ ಚುನಾವಣೆಯಲ್ಲಿ ದಲಿತ ಮತಗಳು ಕೈ ತಪ್ಪಿ ಹೋಗುವ ಆತಂಕದಲ್ಲಿ ಬಿಜೆಪಿಯಿದೆ. ಇತ್ತೀಚೆಗೆ ವಿಧಾನಸಭೆ ಚುನಾವಣೆ ಮುಗಿದ ಮಧ್ಯಪ್ರದೇಶ, ಛತ್ತೀಸ್ ಗಢ ಮತ್ತು ರಾಜಸ್ತಾನ ರಾಜ್ಯಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಕಳಪೆ ಪ್ರದರ್ಶನ ಕಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ.
2014ರಲ್ಲಿ ಒಟ್ಟು 131 ಮೀಸಲು ಲೋಕಸಭಾ ಕ್ಷೇತ್ರಗಳ ಪೈಕಿ 67 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ, ಅದೇ ಪರಿಸ್ಥಿತಿ 2019ರಲ್ಲಿ ಕೂಡ ಮರಳುವುದು ಅಸಾಧ್ಯವಾಗಿದೆ.
ಕಳೆದ ಎರಡು ವರ್ಷಗಳಲ್ಲಿ ಮಧ್ಯಪ್ರದೇಶದಲ್ಲಿ ತೀವ್ರ ದಲಿತ ಪ್ರತಿಭಟನೆ ನಡೆಯುತ್ತಿದ್ದು, ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ದಲಿತ ಮೀಸಲು ಕ್ಷೇತ್ರಗಳಲ್ಲಿ ಪರಾಭವ ಕಂಡಿದೆ. ಇಲ್ಲಿ 2013ರ ವಿಧಾನಸಭೆ ಚುನಾವಣೆಯಲ್ಲಿ 35 ಮೀಸಲು ಕ್ಷೇತ್ರಗಳಲ್ಲಿ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ಕೇವಲ 18 ಸ್ಥಾನಗಳನ್ನು ಪಡೆಯುವಲ್ಲಿ ಸಫಲವಾಯಿತು. ರಾಜಸ್ತಾನದಲ್ಲಿ 2013ರಲ್ಲಿ 32 ಮೀಸಲು ಪರಿಶಿಷ್ಟ ಸ್ಥಾನಗಳನ್ನು ಗೆದ್ದ ಬಿಜೆಪಿಯು ಈ ಬಾರಿ ಗೆದ್ದಿದ್ದು 12 ಸ್ಥಾನಗಳನ್ನು ಮಾತ್ರ.
ಛತ್ತೀಸ್ ಗಢದಲ್ಲಿ ಈ ಸಂಖ್ಯೆ ಇನ್ನೂ ಆತಂಕಕಾರಿಯಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 9 ದಲಿತ ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ವರ್ಷ ಗೆದ್ದಿದ್ದು ಕೇವಲ ಎರಡೇ ಸ್ಥಾನಗಳಲ್ಲಿ.
ಎನ್ ಡಿಎ ನೇತೃತ್ವದ ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದು ಪ್ರತಿಪಕ್ಷಗಳು ಟೀಕಿಸುತ್ತಾ ಬಂದಿರುವುದರಲ್ಲಿ ಯಶಸ್ವಿಯಾಗಿದೆ ಎನ್ನಬಹುದು. ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿರುದ್ಧ ದೌರ್ಜನ್ಯಗಳ ತಡೆಗಟ್ಟುವಿಕೆ ಕಾಯ್ದೆಯನ್ನು ತಂದರೂ ಕೂಡ 2013ರಲ್ಲಿ ಗಳಿಸಿದ ಬೆಂಬಲವನ್ನು ಪಡೆಯುವಲ್ಲಿ ವಿಫಲವಾಗಿದೆ. ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯಲ್ಲಿ ಪ್ರಬಲ ದಲಿತ ನಾಯಕನ ಕೊರತೆ ಎದ್ದು ಕಾಣುತ್ತಿದೆ.
ಛತ್ತೀಸ್ ಗಢ, ಒಡಿಶಾ, ಜಾರ್ಖಂಡ್ ರಾಜ್ಯಗಳು ಪ್ರಬಲ ಬುಡಕಟ್ಟು ಜನಾಂಗಗಳನ್ನು ಹೊಂದಿರುವ ರಾಜ್ಯಗಳಾಗಿವೆ. ದಲಿತರ ಓಲೈಕೆ ಮಾಡಿ ಮತಬ್ಯಾಂಕ್ ರಾಜಕಾರಣ ಮಾಡಲು ಹೊರಟಿದ್ದೇ ಮಧ್ಯ ಪ್ರದೇಶ ಮತ್ತು ರಾಜಸ್ತಾನಗಳಲ್ಲಿ ಬಿಜೆಪಿ ಸೋಲಿಗೆ ಮುಳುವಾಯಿತು ಎನ್ನಲಾಗುತ್ತಿದೆ.
ಉತ್ತರ ಪ್ರದೇಶದಲ್ಲಿ 17 ಮೀಸಲು ಲೋಕಸಭಾ ಕ್ಷೇತ್ರಗಳಿದ್ದು, ಇದು ಕೂಡ ಬಿಜೆಪಿಗೆ ಮಹತ್ವದ್ದಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ