ವಾಸ್ತವದಲ್ಲಿ 'ಮೋದಿ ಕೇರ್' ಗೆ ಪ್ರತಿ ವರ್ಷ 11 ಸಾವಿರ ಕೋಟಿ ರು. ಬೇಕು: ಮೂಲಗಳು

ದೇಶದ ಅರ್ಧದಷ್ಟು ಜನತೆಗೆ ಆರೋಗ್ಯ ವಿಮೆ ಕಲ್ಪಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಬಹು ನಿರೀಕ್ಷಿತ ಮೋದಿ ಕೇರ್ ಅಥವಾ ರಾಷ್ಟ್ರೀಯ ಆರೋಗ್ಯ ರಕ್ಷಣಾ....
ಪ್ರಧಾನಿ ಮೋದಿ
ಪ್ರಧಾನಿ ಮೋದಿ
ನವದೆಹಲಿ: ದೇಶದ ಅರ್ಧದಷ್ಟು ಜನತೆಗೆ ಆರೋಗ್ಯ ವಿಮೆ ಕಲ್ಪಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಬಹು ನಿರೀಕ್ಷಿತ ಯೋಜನೆ ಮೋದಿ ಕೇರ್ ಅಥವಾ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆಗೆ ಪ್ರತಿ ವರ್ಷ 11 ಸಾವಿರ ಕೋಟಿ ರುಪಾಯಿ ಬೇಕಾಗುತ್ತದೆ ಎಂದು ಅಧಿಕಾರಿಗಳು ರಾಯಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಮೋದಿ ಕೇರ್ ಎಂದೇ ಜನಪ್ರಿಯವಾಗುತ್ತಿರುವ ಈ ಯೋಜನೆ ಅಡಿಯಲ್ಲಿ 10 ಕೋಟಿ ಬಡ ಕುಟುಂಬಗಳಿಗೆ ಪ್ರತಿ ವರ್ಷ ತಲಾ 5 ಲಕ್ಷ ರುಪಾಯಿವರೆಗೆ ಆರೋಗ್ಯ ವಿಮೆ ಸೌಲಭ್ಯ ನೀಡುವುದಾಗಿ ನಿನ್ನೆಯಷ್ಟೇ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿದ 2018-19ನೇ ಸಾಲಿನ ಬಜೆಟ್ ನಲ್ಲಿ ಘೋಷಿಸಿದ್ದಾರೆ.
ಈ ಯೋಜನೆಗೆ ಕೇಂದ್ರ ಸರ್ಕಾರ 2018-19ನೇ ಸಾಲಿಗೆ 2 ಸಾವಿರ ಕೋಟಿ ರುಪಾಯಿ ಅನುದಾನ ಒದಗಿಸಿದ್ದು, ಅಗತ್ಯಬಿದ್ದರೆ ಹೆಚ್ಚಿನ ಅನುದಾನ ನೀಡುವುದಾಗಿ ಜೇಟ್ಲಿ ಹೇಳಿದ್ದಾರೆ. ಆದರೆ ಈ ಹೊಸ ಯೋಜನೆಗೆ ಪ್ರತಿ ವರ್ಷ ರಾಜ್ಯ ಮತ್ತು ಕೇಂದ್ರ ಸರ್ಕಾರ ಕನಿಷ್ಠ 11 ಸಾವಿರ ಕೋಟಿ ರುಪಾಯಿ ವೆಚ್ಚ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಮೋದಿ ಕೇರ್ ಗಾಗಿ ಕೇಂದ್ರ ಸರ್ಕಾರ ಪ್ರತಿ ಬಡ ಕುಟುಂಬಕ್ಕೆ 1,100 ರುಪಾಯಿ ವೆಚ್ಚ ಮಾಡುತ್ತಿದೆ ಎಂದು ಹೆಸರು ಹೇಳಲು ಇಚ್ಚಿಸಿದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವರ್ಷವೇ ಈ ಆರೋಗ್ಯ ಯೋಜನೆ ಘೋಷಿಸಲಾಗಿತ್ತು. ಪ್ರತಿ ಬಡ ಕುಟುಂಬಕ್ಕೆ 1 ಲಕ್ಷದವರೆಗೂ ವಿಮೆ ನಿಗದಿ ಮಾಡಲಾಗಿತ್ತು. ಆದರೆ ಈ ಬಜೆಟ್​ನಲ್ಲಿ ಅದರ ಮೊತ್ತವನ್ನು 5 ಲಕ್ಷಕ್ಕೇರಿಸಲಾಗಿದೆ ಮತ್ತು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 30 ಸಾವಿರ ರು.ಗಳವರೆಗೆ ಹೆಚ್ಚುವರಿ ಮೊತ್ತ ನೀಡಲು ಯೋಜಿಸಿದೆ.
ಅರುಣ್ ಜೇಟ್ಲಿ ಅವರು ಮೋದಿ ಕೇರ್ ‘ವಿಶ್ವದಲ್ಲೇ ಅತಿದೊಡ್ಡ ಆರೋಗ್ಯ ಯೋಜನೆ’ ಎಂದು ಘೋಷಿಸಿದ್ದಾರೆ. ಇದು ಭಾರತದ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಬರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com