ಕ್ಯಾಶ್‏ಲೆಸ್ ಮಾದರಿಯಲ್ಲಿ 'ಮೋದಿಕೇರ್'; ಅಗತ್ಯ ಬಿದ್ದರೆ ಹೆಚ್ಚಿನ ಅನುದಾನ: ಅರುಣ್ ಜೈಟ್ಲಿ

2018-19ರ ಕೇಂದ್ರ ಬಜೆಟ್ ನಲ್ಲಿ ಪ್ರಸ್ತಾಪಿಸಿರುವ ಆರೋಗ್ಯ ವಿಮಾ ಯೋಜನೆ ವಿಶ್ವದಲ್ಲಿಯೇ ಅತಿದೊಡ್ಡದು ಎನಿಸಿದ್ದು, ಆಸ್ಪತ್ರೆ ವೆಚ್ಚ ಸಂಪೂರ್ಣ ಉಚಿತವಾಗಿರಲಿದೆ. ಇದಕ್ಕೆ ಅಗತ್ಯವಿರುವಷ್ಟು ಹಣಕಾಸು ಒದಗಿಸಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಕೇಂದ್ರ ಹಣಕಾಸು ಸಚಿವ  ಅರುಣ್  ಜೇಟ್ಲಿ ಅವರ (ಸಾಂದರ್ಭಿಕ ಚಿತ್ರ)
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ (ಸಾಂದರ್ಭಿಕ ಚಿತ್ರ)

ನವದೆಹಲಿ: 2018-19ರ ಕೇಂದ್ರ ಬಜೆಟ್ ನಲ್ಲಿ ಪ್ರಸ್ತಾಪಿಸಿರುವ ಆರೋಗ್ಯ ವಿಮಾ ಯೋಜನೆ ವಿಶ್ವದಲ್ಲಿಯೇ ಅತಿದೊಡ್ಡದು ಎನಿಸಿದ್ದು, ಆಸ್ಪತ್ರೆ ವೆಚ್ಚ ಕ್ಯಾಶ್‏ಲೆಸ್ ಮಾದರಿಯಲ್ಲಿ ಇರುತ್ತದೆ ಮತ್ತು ಅಗತ್ಯ ಬಿದ್ದರೆ ಹೆಚ್ಚಿನ ಹಣಕಾಸು ಒದಗಿಸಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಜೇಟ್ಲಿ , ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ ಮೋದಿ ಕೇರ್ ಎಂದೇ ಜನಪ್ರಿಯವಾಗಿದ್ದು, ದೇಶದ ಜನಸಂಖ್ಯೆಯಲ್ಲಿ ಶೇ. 40 ರಷ್ಟಿರುವ 10 ಕೋಟಿ ಬಡ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ. ನಷ್ಟು ಆರೋಗ್ಯ ವಿಮೆ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಯೋಜನೆ ಮೂಲಕ ಆಸ್ಪತ್ರೆ ಸೇವಾ ಸೌಲಭ್ಯ ಪಡೆಯಬಹುದಾಗಿದ್ದು, ರಾಜ್ಯದ ಪ್ರಮುಖ ಸರ್ಕಾರಿ ಹಾಗೂ ಆಯ್ದು ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲಾಗುವುದು. ಟ್ರಸ್ಟ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಇದರ ಮೂಲಕವೇ ವಿಮಾ ಸೌಲಭ್ಯ ನೀಡಲಾಗುವುದು, ಆದರೆ, ಮರುಪಾವತಿ ಮಾಡುವುದಿಲ್ಲ ಎಂದು ಸ್ಪಷ್ಪಪಡಿಸಿದರು.

ನೀತಿ ಆಯೋಗ ಮತ್ತು ಆರೋಗ್ಯ ಸಚಿವಾಲಯ ವಿಮಾ ಮಾದರಿ ರೂಪು ರೇಷೆ ತಯಾರಿಸಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಯೋಜನೆ ಜಾರಿಗೊಳಿಸಲಾಗುವುದು, ಈ ವರ್ಷ ಮುಂದಿನ ದಿನಗಳಲ್ಲೇ ಇದನ್ನು ಕಾರ್ಯಗತಗೊಳಿಸಲಾಗುವುದು ಎಂದು ಅರುಣ್ ಜೇಟ್ಲಿ  ಹೇಳಿದರು.

ಈ ಯೋಜನೆ ಅನುಷ್ಠಾನಕ್ಕಾಗಿ 2 ಸಾವಿರ ಕೋಟಿ ರೂಪಾಯಿ ಮೀಸಲಿರಿಸಿದ್ದು, ತಜ್ಞರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಹಣಕಾಸಿನ ನೆರವು ನೀಡಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com