'ಆಧಾರ್' ಇಲ್ಲವೆಂದು ಫಲಾನುಭವಿಗಳಿಗೆ ಅಗತ್ಯ ಸೇವೆಗಳನ್ನು ನಿರಾಕರಿಸುವಂತಿಲ್ಲ:ಯುಐಡಿಎಐ

ಬಯೋಮೆಟ್ರಿಕ್ ಆಧಾರ್ ಗುರುತು ಪತ್ರವಿಲ್ಲವೆಂದು ಜನರಿಗೆ ಅಗತ್ಯ ಸೇವೆಗಳಾದ ವೈದ್ಯಕೀಯ ಸೌಲಭ್ಯ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಬಯೋಮೆಟ್ರಿಕ್ ಆಧಾರ್ ಗುರುತು ಪತ್ರವಿಲ್ಲವೆಂದು ಜನರಿಗೆ ಅಗತ್ಯ ಸೇವೆಗಳಾದ ವೈದ್ಯಕೀಯ ಸೌಲಭ್ಯ, ಶಾಲಾ ಪ್ರವೇಶಾತಿ, ರೇಷನ್ ಕಾರ್ಡು ಇತ್ಯಾದಿಗಳನ್ನು ನಿರಾಕರಿಸಬಾರದು ಎಂದು ಆಧಾರ್ ಸಂಖ್ಯೆ ನೀಡುವ ಪ್ರಾಧಿಕಾರ ಯುಐಡಿಎಐ ತಿಳಿಸಿದೆ.
ಸರ್ಕಾರದ ಯೋಜನೆಗಳ ನಿಜವಾದ ಫಲಾನುಭವಿಗಳಿಗೆ ಅವರ ಅಗತ್ಯ ಸೇವೆಗಳನ್ನು ಸರ್ಕಾರಿ ಇಲಾಖೆಗಳು ಮತ್ತು ಆಡಳಿತ ನಿರ್ದೇಶನಾಲಯಗಳು ನಿರಾಕರಿಸಬಾರದು ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಹೇಳಿಕೆಯಲ್ಲಿ ತಿಳಿಸಿದೆ.
2017, ಅಕ್ಟೋಬರ್ 24ರಂದು ಯುಐಡಿಎಐ ಹೊರಡಿಸಿರುವ ಸುತ್ತೋಲೆಯಲ್ಲಿ ಆಧಾರ್ ಸಂಖ್ಯೆಯನ್ನು ನಿಭಾಯಿಸುವ ನಿಯಮಗಳಲ್ಲಿ ವಿನಾಯಿತಿಯಿದೆ. ಇದನ್ನು ಸರ್ಕಾರದ ಎಲ್ಲಾ ಇಲಾಖೆಗಳು ಕಡ್ಡಾಯವಾಗಿ ಪಾಲಿಸಬೇಕೆಂದು ಪ್ರಾಧಿಕಾರ ಹೇಳಿದೆ.
ಆಸ್ಪತ್ರೆ ವೆಚ್ಚ, ವೈದ್ಯಕೀಯ ಸೇವೆಯಂತಹ ಅಗತ್ಯ ಸೇವೆಗಳನ್ನು ಆಧಾರ್ ಸಂಖ್ಯೆ ಇಲ್ಲವೆಂದು ಫಲಾನುಭವಿಗಳಿಗೆ ನಿರಾಕರಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಾಧಿಕಾರ ಈ ಸುತ್ತೋಲೆ ಹೊರಡಿಸಿದೆ. ಫಲಾನುಭವಿಗಳಿಗೆ ಆಧಾರ್ ಸಂಖ್ಯೆಯಿಲ್ಲವೆಂದು ಅಗತ್ಯ ಸೇವೆಗಳನ್ನು ನೀಡಲು ನಿರಾಕರಿಸಿದ್ದು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಸಹ ನೀಡಿದೆ.
ಸಾರ್ವಜನಿಕ ಸೇವೆಗಳ ವಿತರಣೆಯಲ್ಲಿ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಹೆಚ್ಚಿನ ನಿಖರತೆ ಮತ್ತು ಪಾರದರ್ಶಕತೆ ತರಲು ಆಧಾರ್ ಸಂಖ್ಯೆಯನ್ನು ಜಾರಿಗೆ ತರಲಾಗಿದ್ದು ಅದರ ದುರುಪಯೋಗವಾಗಬಾರದು ಮತ್ತು ಫಲಾನುಭವಿಗಳಿಗೆ ಅಗತ್ಯ ಸೇವೆಗಳ ನೀಡಿಕೆಯಲ್ಲಿ ವಿಳಂಬವಾಗಬಾರದು ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com