
ನವದೆಹಲಿ: ಟ್ವಿಟ್ಟರ್ ನಲ್ಲಿ ಕೆಲವು ಕಾಂಗ್ರೆಸ್ ಮುಖಂಡರನ್ನು ಅನುಸರಿಸುವ ಮೂಲಕ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಸಾಕಷ್ಟು ಕುತೂಹಲ ಮೂಡಿಸಿದ್ದಾರೆ.
ಕಾಂಗ್ರೆಸ್ ಬಗ್ಗೆ ಬಿಗ್ ಬಿಯವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಠಾತ್ತನೆ ಆಸಕ್ತಿ ತಲೆದೋರಲು ಕಾರಣವೇನು ಎಂಬ ಬಗ್ಗೆ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮತ್ತು ಅನುಮಾನಗಳು ಗರಿಗೆದರಿವೆ. ಒಂದು ಕಾಲದಲ್ಲಿ ಅಮಿತಾಬ್ ಬಚ್ಚನ್ ಅವರು ಕಾಂಗ್ರೆಸ್ ಜೊತೆ ಗುರುತಿಸಿಕೊಂಡು ಒಡನಾಡಿಗಳಾಗಿದ್ದವರು ನಂತರ ಕಾಂಗ್ರೆಸ್ ನ್ನು ತೊರೆದಿದ್ದರು.
ಅಮಿತಾಬ್ ಅವರು ಕಾಂಗ್ರೆಸ್ ಪಕ್ಷದ ಟ್ವಿಟ್ಟರ್ ಪುಟವನ್ನು, ರಾಹುಲ್ ಗಾಂಧಿಯವರನ್ನು ಅನುಸರಿಸಿದ ನಂತರ ನಂತರ ಹಿರಿಯ ನಾಯಕರಾದ ಪಿ. ಚಿದಂಬರಂ, ಕಪಿಲ್ ಸಿಬಲ್, ಅಹ್ಮದ್ ಪಟೇಲ್, ಅಶೋಕ್ ಗೆಹ್ಲೊಟ್, ಅಜಯ್ ಮಕೇನ್, ಜ್ಯೋತಿರಾದಿತ್ಯ ಸಿಂಧ್ಯ, ಸಚಿನ್ ಪೈಲೆಟ್ ಮತ್ತು ಸಿಪಿ ಜೋಶಿಯವರನ್ನು ಈ ತಿಂಗಳಿನಿಂದ ಅನುಸರಿಸುತ್ತಿದ್ದಾರೆ.
ಅಲ್ಲದೆ ಕಾಂಗ್ರೆಸ್ ನಾಯಕರಾದ ಮನೀಶ್ ತಿವಾರಿ, ಶಕೀಲ್ ಅಹ್ಮದ್, ಸಂಜಯ್ ನಿರುಪಮ್, ರಂದೀಪ್ ಸುರ್ಜೆವಾಲ ಪ್ರಿಯಾಂಕ ಚತುರ್ವೇದಿ ಮತ್ತು ಸಂಜಯ್ ಜ್ಹಾ ಅವರನ್ನು ಕೂಡ ಅನುಸರಿಸುತ್ತಿದ್ದಾರೆ.
ನೆಹರೂ ಗಾಂಧಿ ಕುಟುಂಬಕ್ಕೆ ಒಂದು ಕಾಲದಲ್ಲಿ ಹತ್ತಿರವಾಗಿದ್ದ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರಿಗೆ ನಿಕಟವರ್ತಿಯಾಗಿದ್ದ ಅಮಿತಾಬ್ ಬಚ್ಚನ್ ಪ್ರಸ್ತುತ ಗುಜರಾತ್ ರಾಜ್ಯದ ಮತ್ತು ಕೇಂದ್ರ ಸರ್ಕಾರದ ಕೆಲವು ಯೋಜನೆಗಳ ಪ್ರಚಾರ ರಾಯಭಾರಿಯಾಗಿದ್ದಾರೆ.
ಅಮಿತಾಬ್ ಬಚ್ಚನ್ ಅವರ ಟ್ವಿಟ್ಟರ್ ಖಾತೆಯಲ್ಲಿ 33.1 ದಶಲಕ್ಷ ಅನುಯಾಯಿಗಳಿದ್ದು, ಅವರು 1,689 ಮಂದಿಯನ್ನು ಅನುಸರಿಸುತ್ತಿದ್ದಾರೆ.
Advertisement