ವಿಶೇಷ ಅಗತ್ಯವಿರುವವರು ಲ್ಯಾಪ್ ಟಾಪ್ ಬಳಸಿ ಬೋರ್ಡ್ ಪರೀಕ್ಷೆ ಬರೆಯಬಹುದು: ಸಿಬಿಎಸ್ಇ

ಹತ್ತು ಹಾಗೂ ಹನ್ನೆರಡನೇ ತರಗತಿಯ ಪರೀಕ್ಷೆಗೆ ಹಾಜರಾಗುವ ವಿಶೇಷ ಅಗತ್ಯವಿರುವ ಮಕ್ಕಳಿಗೆ ಈ ವರ್ಷದಿಂದ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಬಳಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಹತ್ತು ಹಾಗೂ ಹನ್ನೆರಡನೇ ತರಗತಿಯ ಪರೀಕ್ಷೆಗೆ ಹಾಜರಾಗುವ ವಿಶೇಷ ಅಗತ್ಯವಿರುವ ಮಕ್ಕಳಿಗೆ ಈ ವರ್ಷದಿಂದ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಬಳಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ಕಂಪ್ಯೂಟರ್ ಬಳಕೆ ಪ್ರಸ್ತಾವನೆಯನ್ನು  ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್ಇ) ಅಂಗೀಕರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.
ಅದಾಗ್ಯೂ ಅಭ್ಯರ್ಥಿಗಳು ನೊಂದಾಯಿತ ವೈದ್ಯರು ನೀಡಿದ ಪ್ರಮಾಣಪತ್ರವನ್ನು ಅಥವಾ ಮಾನಸಿಕ ತಜ್ಞರು ನೀಡಿದ ಕಂಪ್ಯೂಟರ್ ಸೌಲಭ್ಯ ಬಳಕೆ ಶಿಫಾರಸು ಪತ್ರವನ್ನು ಮಂಡಳಿಗೆ ಸಲ್ಲಿಕೆ ಮಾಡಬೇಕಿದೆ. 
ಪರೀಕ್ಷೆ ಬರೆಯಲಿರುವ ವಿಶೇಷ ಅಗತ್ಯವಿರುವವರಿಗಾಗಿ ಕಂಪ್ಯೂಟರ್ ಬಳಕೆಗೆ ಈ ವರ್ಷದಿಂದ ಅವಕಾಶ ಕಲ್ಪಿಸಲಾಗಿದ್ದು ಉತ್ತರಗಳನ್ನು ಬರೆಯಲು, ಪ್ರಶ್ನೆಗಳನ್ನು ದೊಡ್ಡ ಫಾಂಟ್ ನಲ್ಲಿ ಓದಲು ಹಾಗೂ ಕೇಳಿಸಿಕೊಳ್ಳಲು ಮಾತ್ರವೇ ಕಂಪ್ಯೂಟರ್ ಬಳಕೆ ಸೀಮಿತವಾಗಿರಲಿದೆ.
ಪರೀಕ್ಷೆ ಕೋಣೆಯಲ್ಲಿ ಬಳಸುವ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಗೆ ಇಂಟರ್ ನೆಟ್ ಸಂಪರ್ಕವಿರುವುದಿಲ್ಲ. ಅಲ್ಲದೆ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿಕ್ಕಾಗಿ ಬಳಸುವ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ನ್ನು ಫಾರ್ಮ್ಯಾಟ್ ಮಾಡಿಸಿರಬೇಕು. ಕಂಪ್ಯೂಟರ್ ಶಿಕ್ಷಕರು ಇಂತಹಾ ಅಭ್ಯರ್ಥಿಗಳ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ನ್ನು ಪರಿಶೀಲಿಸಿದ ಬಳಿಕವೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತದೆ.
ಈ ಸೌಲಭ್ಯ ಅಗತ್ಯವಿರುವ ಅಭ್ಯರ್ಥಿಗಳು ತಮ್ಮ ಶಾಲೆಯ ಮೂಲಕ ಅಗತ್ಯ ದಾಖಲೆಗಳೊಡನೆ ಕೋರಿಕೆ ಪತ್ರವನ್ನು ಸಿಎಸ್ ಗೆ ಕಳಿಸಬೇಕಿದೆ.ಹಾಗೆಯೇ ಅಭ್ಯರ್ಥಿ ಟೈಪ್ ಮಾಡಿದ ಉತ್ತರ ಪತ್ರಿಕೆಯ ಮೇಲೆ ಪರೀಕ್ಷಾ ಕೊಠಡಿಯಲ್ಲಿರುವ ಮಾರ್ಗದರ್ಶಕರು ಸಹಿ ಹಾಕಿ ಅದನ್ನು ಸಿಎಸ್ ಮೂಲಕ ಬೋರ್ಡ್ ಗೆ ಕಳಿಸಲಿದ್ದಾರೆ.
ಇನ್ನು ವಿಶೇಷ ಚೇತನ ಅಭ್ಯರ್ಥಿಗಳು ಯಾರಿಗಾದರೂ ಪ್ರಶ್ನೆಗಳನ್ನು ಓದುವುದಕ್ಕಾಗಿ ಸಹಾಯಕರು ಅಗತ್ಯವಾಗಿದ್ದರೆ ಅದಕ್ಕೆ ಸಹ ಬೋರ್ಡ್ ಅವಕಾಶ ಒದಗಿಸಲಿದೆ. ಹಾಗೆಯೇ ವಿಶೇಷ ಚೇತನರು ತಮ್ಮ ದೈಹಿಕ ತೊಂದರೆಗಳಿಂದಾಗಿ ಕ್ರಮವಾಗಿ ತರಗತಿಗಳಿಗೆ ಹಾಜರಾಗದೆ ಹೋದಲ್ಲಿ ಅಂತಹಾ ಅಭ್ಯರ್ಥಿಗಳಿಗೆ ಹಾಜರಾತಿಯಲ್ಲಿ ಶೇ.50 ರಿಯಾಯಿತಿ ನೀಡುವುದಕ್ಕೆ ಬೋರ್ಡ್ ಅನುಮತಿಸಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com