ಕಂಚಿ ಶ್ರೀಗಳ ನಿಧನಕ್ಕೆ ಗಣ್ಯರಿಂದ ಸಂತಾಪ, ಇಲ್ಲಿದೆ ಶ್ರೀಗಳ ಹಿನ್ನೆಲೆ

ಕಂಚಿ ಕಾಮಕೋಟಿ ಶಂಕರ ಪೀಠದ ಪೀಠಾಧಿಪತಿ ಜಯೇಂದ್ರ ಸರಸ್ವತಿ ಸ್ವಾಮಿಗಳು ವಿದೇಹ ಮುಕ್ತಿ ಪಡೆದಿದ್ದು, ಶ್ರೀಗಳ ನಿಧನಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.
ಜಯೇಂದ್ರ ಸರಸ್ವತಿ ಸ್ವಾಮಿಗಳು
ಜಯೇಂದ್ರ ಸರಸ್ವತಿ ಸ್ವಾಮಿಗಳು
ನವದೆಹಲಿ: ಕಂಚಿ ಕಾಮಕೋಟಿ ಶಂಕರ ಪೀಠದ ಪೀಠಾಧಿಪತಿ ಜಯೇಂದ್ರ ಸರಸ್ವತಿ ಸ್ವಾಮಿಗಳು ವಿದೇಹ ಮುಕ್ತಿ ಪಡೆದಿದ್ದು, ಶ್ರೀಗಳ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಮನುಕುಲದ ಅಭಿವೃದ್ಧಿಗೆ ಹಾಗೂ ಆಧ್ಯಾತ್ಮದ ಪ್ರಚಾರಕ್ಕೆ ಅವರ ಕೊಡುಗೆ ಅನನ್ಯವಾದದ್ದು ಹಾಗೂ ಇತರರಿಗೆ ಸ್ಪೂರ್ತಿಯಾಗುವಂತಹದ್ದು, ಕಂಚಿ ಶ್ರೀಗಳಿಗೆ ನನ್ನ ಪ್ರಣಾಮಗಳು ಎಂದು ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದ್ದಾರೆ. 

ಇದೇ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಸಹ ಕಂಚಿ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದು, "ಕಂಚಿ ಮಠದ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಶ್ರೀಗಳ ನಿಧನ ಆಘಾತ ಉಂಟುಮಾಡಿದೆ. ಬಡವರಿಗೆ ಉಚಿತ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯ ಕಲ್ಪಿಸಿದ ಅವರ ಸಾಮಾಜಿಕ ಕಾಳಜಿ ಅತ್ಯಮೂಲ್ಯ. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ. 

ಕಂಚಿ ಶ್ರೀಗಳ ಹಿನ್ನೆಲೆ
ತಮಿಳುನಾಡಿನ ತಿರುವರೂರ್ ಜಿಲ್ಲೆಯಲ್ಲಿ  1935 ರ ಜುಲೈ 18 ರಂದು ಜನಿಸಿದ್ದ ಜಯೇಂದ್ರ ಸರಸ್ವತಿಗಳ ಪೂರ್ವಾಶ್ರಮದ ಹೆಸರು ಸುಬ್ರಹ್ಮಣ್ಯಂ ಮಹಾದೇವ ಐಯ್ಯರ್ ಎಂದು. 19 ವರ್ಷದವರಿದ್ದಾಗಲೇ ಕಂಚಿಯ ಹಿಂದಿನ ಪೀಠಾಧಿಪತಿಗಳಾಗಿದ್ದ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳ ಉತ್ತರಾಧಿಕಾರಿಗಳಾಗಿ ಸನ್ಯಾಸ ಸ್ವೀಕರಿಸಿದ್ದರು.  ಮೂಲತಃ ತಮಿಳುನಾಡಿನವರಾಗಿದ್ದರೂ ಬಹುಭಾಷಾ ಪಂಡಿತರಾಗಿದ್ದ ಜಯೇಂದ್ರ ಸರಸ್ವತಿ ಸ್ವಾಮಿಗಳು ಕನ್ನಡ ಭಾಷೆಯನ್ನೂ ನಿರರ್ಗಳವಾಗಿ ಮಾತನಾಡುತ್ತಿದ್ದರು.

1994 ರಲ್ಲಿ ಚಂದ್ರಶೇಖರೇಂದ್ರ ಸರಸ್ವತಿಗಳು ಇಹಲೋಕ ತ್ಯಜಿಸಿದ ನಂತರ ಜಯೇಂದ್ರ ಸರಸ್ವತಿ ಸ್ವಾಮಿಗಳು ಕಂಚಿ ಕಾಮಕೋಟಿ ಪೀಠಾಧಿಪತಿಗಳಾಗಿ ಅಧಿಕಾರ ವಹಿಸಿಕೊಂಡರು.  ಇದಕ್ಕೂ ಮುನ್ನ 1987 ರಲ್ಲಿ ಹಿರಿಯ ಪೀಠಾಧಿಪತಿಗಳಾದ ಚಂದ್ರಶೇಖರೇಂದ್ರ ಸರಸ್ವತಿಗಳಿದ್ದಾಗಲೇ ಜಯೇಂದ್ರ ಸರಸ್ವತಿ ಸ್ವಾಮಿಗಳು ಮಠವನ್ನು ಬಿಟ್ಟು ಅಜ್ಞಾತ ವಾಸದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಚಂದ್ರಶೇಖರೇಂದ್ರ ಸರಸ್ವತಿಗಳಿದ್ದಾಗಲೇ ಜಯೇಂದ್ರ ಸರಸ್ವತಿಗಳ ಉತ್ತರಾಧಿಕಾರಿಯನ್ನಾಗಿ ವಿಜಯೇಂದ್ರ ಸರಸ್ವತಿಗಳನ್ನು ನೇಮಿಸಲಾಗಿತ್ತು.  ಶ್ರೀಗಳು ಕೆಲವು ದಿನಗಳ ನಂತರ ಕರ್ನಾಟಕದ ತಲಕಾವೇರಿಯಲ್ಲಿ ಪತ್ತೆಯಾಗಿದ್ದರು. ಈ ಘಟನೆ ನಡೆದ ನಂತರದ ಕೆಲವು ವರ್ಷಗಳ ಅವಧಿಯಲ್ಲಿ ಕಂಚಿ ಕಾಮಕೋಟಿ ಮಠದಲ್ಲಿ ಮೂವರು ಪೀಠಾಧಿಪತಿಗಳಿದ್ದರು. 

ರಾಜಕೀಯ ವಲಯದಲ್ಲಿಯೂ ಹೆಚ್ಚು ಪ್ರಭಾವ ಹೊಂದಿದ್ದ ಕಂಚಿ ಶ್ರೀಗಳು ತಮ್ಮ ಅವಧಿಯಲ್ಲಿ ಹಲವು ವಿದ್ಯಾಸಂಸ್ಥೆಗಳನ್ನು ಹಾಗೂ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಿದ್ದರು. ಮಾ.1 ರಂದು ಬೆಳಿಗ್ಗೆ 8 ರಿಂದ ಶ್ರೀಗಳ ಬೃಂದಾವನ ಪ್ರವೇಶ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಠದ ಟ್ವಿಟರ್ ಖಾತೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com