ಮಕ್ಕಳಿಲ್ಲದ ವೃದ್ಧ ದಂಪತಿ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಮನವಿ

ಸಮಾಜಕ್ಕೆ ಮತ್ತು ವೈಯಕ್ತಿಕವಾಗಿ ತಾವು ಯಾವುದೇ ರೀತಿಯಲ್ಲಿಯೂ ....
ವಯೋವೃದ್ಧೆ ಇರಾವತಿ
ವಯೋವೃದ್ಧೆ ಇರಾವತಿ
Updated on
ಮುಂಬೈ: ಸಮಾಜಕ್ಕೆ ಮತ್ತು ವೈಯಕ್ತಿಕವಾಗಿ ತಾವು ಯಾವುದೇ ರೀತಿಯಲ್ಲಿಯೂ ಪ್ರಯೋಜನವಿಲ್ಲದಿರುವುದರಿಂದ ದಯಾಮರಣಕ್ಕೆ ಕೋರಿ ಮುಂಬೈಯ ವೃದ್ಧ ದಂಪತಿ  ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮನವಿ ಮಾಡಿರುವ ವಿಲಕ್ಷಣ ಪ್ರಕರಣವೊಂದು ನಡೆದಿದೆ. 
ನಮಗೆ ಮಕ್ಕಳಿಲ್ಲ, ಬಂಧು ಬಳಗವಿಲ್ಲ, ಈ ಭೂಮಿ ಮೇಲೆ ಬದುಕಿ ಪ್ರಯೋಜನವಿಲ್ಲ. ಸಮಾಜಕ್ಕೆ ಭಾರವಾಗಿ ದೇಶದ ಸಂಪನ್ಮೂಲ ಬರಿದು ಮಾಡಲು ಬದುಕುವುದಕ್ಕಿಂತ ಸಾಯುವುದೇ ಲೇಸು ಎಂದು ಈ ವೃದ್ಧ ದಂಪತಿ ತೀರ್ಮಾನ ಮಾಡಿದ್ದಾರೆ.
ನಾರಾಯಣ್ ಲಾವಟೆ(88 ವ) ಮತ್ತು ಅವರ ಪತ್ನಿ ಇರಾವತಿ (78ವ) ಮಕ್ಕಳಿಲ್ಲದಿರುವುದರಿಂದ ತಮ್ಮ ಸೋದರ, ಸೋದರಿಯರು ಕೂಡ ಬದುಕುಳಿದಿಲ್ಲದಿರುವುದರಿಂದ ತಾವು ಈ ದೇಶದಲ್ಲಿ ಬದುಕುಳಿದಿರುವುದು ಸಮಾಜಕ್ಕೆ ನಿಷ್ಟ್ರಯೋಜಕ ಎಂದು ಹೇಳಿ ದಯಾಮರಣ ನೀಡಬೇಕೆಂದು ಕೋರಿದ್ದಾರೆ. ಲಾವಟೆ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ನಿವೃತ್ತಿಯಾಗಿದ್ದು, ಇರಾವತಿ ಶಾಲಾ ನಿವೃತ್ತ ಪ್ರಾಂಶುಪಾಲೆ.
ಈ ವೃದ್ಧ ದಂಪತಿ ದಕ್ಷಿಣ ಮುಂಬೈಯ ಚರ್ನಿ ರಸ್ತೆಯಲ್ಲಿ ವಾಸಿಸುತ್ತಿದ್ದು, ತಾವು ಗಂಭೀರ ಕಾಯಿಲೆಗೆ ಒಳಗಾಗಿ ಸಾಯುವವರೆಗೆ ಕಾಯುವ ಬದಲು ತಮಗೆ ದಯಾಮರಣ ನೀಡಬೇಕೆಂದು ರಾಷ್ಟ್ರಪತಿಯವರನ್ನು ಕೋರಿದ್ದಾರೆ.
ಮರಣದಂಡನೆ ಕೋರಿದವರಿಗೆ ಕರುಣೆಯನ್ನು ತೋರಿಸುವ ಅಧಿಕಾರವೂ ರಾಷ್ಟ್ರಪತಿಯವರಿಗಿದೆ. ಆದರೆ ನಮಗೆ ದಯಾಮರಣಕ್ಕೆ ರಾಷ್ಟ್ರಪತಿಯವರು ಅವಕಾಶ ನೀಡಬೇಕೆಂದು ರಾಜ್ಯ ರಸ್ತೆ ಸಾರಿಗೆ ನಿಗಮ ವೃತ್ತಿಯಿಂದ ನಿವೃತ್ತಿ ಪಡೆದ ನಾರಾಯಣ್ ಲಾವಟೆ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದರು.
ತಮ್ಮ ಮನವಿ ಬಗ್ಗೆ ಸುದ್ದಿ ಸಂಸ್ಥೆಗೆ ಮಾತನಾಡಿದ ಲಾವಟೆ, ಟೆರೇಸ್ ಮೇಲಿಂದ ಜಿಗಿದು ಅಥವಾ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದರೆ ತಾವು ಸಾಯುತ್ತೇವೆ ಎಂಬ ಖಾತ್ರಿಯಿಲ್ಲ ಎಂದು ಹೇಳುತ್ತಾರೆ.
ತಮ್ಮ ಜೀವನವನ್ನು ಕೊನೆಗಾಣಿಸಲು ಆತ್ಮಹತ್ಯೆ ಮಾಡಿಕೊಳ್ಳಲು ಸ್ವಿಡ್ಜರ್ಲೆಂಡ್ ನಲ್ಲಿ ನಲ್ಲಿ ಡಿಗ್ನಿಟಾಸ್ ನಂತಹ ಸಂಘಟನೆಯಿದೆ.ಗುಣಮಟ್ಟದ ಅನುಭವಿ ವೈದ್ಯರು ಈ  ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತಾರೆ. ಆ ಸಂಘಟನೆಯ ಸದಸ್ಯರಾಗಿ ನಾವು ನೋಂದಾಯಿತರಾಗಿದ್ದೇವೆ ಆದರೆ ನನ್ನಲ್ಲಿ ಪಾಸ್ ಪೋರ್ಟ್ ಇಲ್ಲದಿರುವುದರಿಂದ ಅಲ್ಲಿಗೆ ನಾನು ಹೋಗಲು ಸಾಧ್ಯವಿಲ್ಲ ಎನ್ನುತ್ತಾರೆ ಲಾವಟೆ. ಸಕ್ರಿಯ ದಯಾಮರಣಕ್ಕೆ ಕೋರಿ ನಾವು ರಾಷ್ಟ್ರಪತಿಯವರಿಗೆ ವಿಶೇಷ ಮನವಿ ಮಾಡಿದ್ದೇವೆ ಎಂದರು.
ಕಳೆದ ವರ್ಷ ಡಿಸೆಂಬರ್ 21ರಂದು ರಾಷ್ಟ್ರಪತಿಯವರಿಗೆ ದಂಪತಿ ಮನವಿ ಸಲ್ಲಿಸಿದ್ದು ತಾವಿಬ್ಬರೂ ಉತ್ತಮ ಆರೋಗ್ಯ ಹೊಂದಿದ್ದೇವೆ. ಯಾವುದೇ ಗಂಭೀರ ಕಾಯಿಲೆಗಳಿಂದ ಬಳಲುತ್ತಿಲ್ಲ. ಅಲ್ಲಿಯವರೆಗೆ ಬದುಕುವುದು ಬೇಡ ಎಂದು ನಮಗನ್ನಿಸುತ್ತಿದೆ ಎನ್ನುತ್ತಾರೆ.
ನಮ್ಮ ಮರಣಾ ನಂತರ ದೇಹವನ್ನು ದಾನ ಮಾಡಲು ಮತ್ತು ನಮ್ಮಲ್ಲಿರುವ ಸ್ವಲ್ಪ ಆಸ್ತಿಯನ್ನು ರಾಜ್ಯ ಸರ್ಕಾರಕ್ಕೆ ನೀಡಲು ನಿರ್ಧರಿಸಿದ್ದೇವೆ. ನಮ್ಮ ಕುಟುಂಬದಲ್ಲಿ ಬೇರೆ ಯಾರೂ ಇಲ್ಲ ಮತ್ತು ನಮಗೆ ಮಕ್ಕಳು ಕೂಡ ಇಲ್ಲ ಎನ್ನುತ್ತಾರೆ ಲಾವಟೆ.
ಅವರ ಪತ್ನಿ ಇರಾವತಿ ಮಾತನಾಡಿ, ನನಗೆ ಎರಡು ಆಪರೇಷನ್ ಗಳಾಗಿವೆ. ನನಗೆ ಒಬ್ಬಳೇ ಹೊರಹೋಗಲು ಸಾಧ್ಯವಾಗುವುದಿಲ್ಲ. ನನಗೆ ಮನೆಯಲ್ಲಿ ಒಬ್ಬಳೇ ಕುಳಿತುಕೊಳ್ಳಲು ಕಷ್ಟವಾಗುತ್ತಿದೆ. ನಾನು ಅಧ್ಯಾಪಕಿಯಾಗಿದ್ದೆ. ಇನ್ನು ಮುಂದೆ ನಾನು ಬದುಕಿ ಏನು ಪ್ರಯೋಜನ ಎಂದು ಕೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com