ಆಪ್ ಶಾಸಕರ ಅನರ್ಹತೆ; ರಾಷ್ಟ್ರಪತಿಗಳು ನಮ್ಮ ವಿಚಾರ ಆಲಿಸಬೇಕು: ಮನಿಶ್ ಸಿಸೋಡಿಯಾ

ಚುನಾವಣಾ ಆಯೋಗ ನಮ್ಮ ಪಕ್ಷದ ಶಾಸಕರಿಗೆ ಮತ್ತು ಪಕ್ಷಕ್ಕೆ ಅಭಿಪ್ರಾಯ ಮಂಡಿಸಲು ಅವಕಾಶ ನೀಡದೇ ಶಾಸಕರ ಅನರ್ಹತೆಗೆ ಶಿಫಾರಸು....
ಮನಿಶ್ ಸಿಸೋಡಿಯಾ
ಮನಿಶ್ ಸಿಸೋಡಿಯಾ
ನವದೆಹಲಿ: ಚುನಾವಣಾ ಆಯೋಗ ನಮ್ಮ ಪಕ್ಷದ ಶಾಸಕರಿಗೆ ಮತ್ತು ಪಕ್ಷಕ್ಕೆ ಅಭಿಪ್ರಾಯ ಮಂಡಿಸಲು ಅವಕಾಶ ನೀಡದೇ ಶಾಸಕರ ಅನರ್ಹತೆಗೆ ಶಿಫಾರಸು ಮಾಡಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು ಶನಿವಾರ ಆರೋಪಿಸಿದ್ದಾರೆ.
ತಮ್ಮ ಪಕ್ಷದ ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮನಿಶ್ ಸಿಸೋಡಿಯಾ, ಲಾಭದಾಯಕ ಹುದ್ದೆಗೆ ಸಂಬಂಧಿಸಿದಂತೆ ಆಯೋಗ ಯಾವುದೇ ವಿಚಾರಣೆ ನಡೆಸಿಲ್ಲ ಮತ್ತು ನಮ್ಮ ನಿಲುವು ತಿಳಿಸಲು ಅವಕಾಶ ನೀಡಿಲ್ಲ. ಹೀಗಾಗಿ ರಾಷ್ಟ್ರಪತಿಗಳು ನಮ್ಮ ವಿಚಾರವನ್ನು ಕೇಳಬೇಕು ಎಂದು ಮನವಿ ಮಾಡುತ್ತೇನೆ ಎಂದರು. ಅಲ್ಲದೆ ಈ ಸಂಬಂಧ ಆಪ್ ಶಾಸಕರು ರಾಷ್ಟ್ರಪತಿಗಳನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ದೆಹಲಿ ಉಪ ಮುಖ್ಯಮಂತ್ರಿ, ರಾಷ್ಟ್ರ ರಾಜಧಾನಿಯಲ್ಲಿ 'ಪ್ರಾಮಾಣಿಕ ಕೆಲಸ' ಮಾಡುತ್ತಿರುವುದರಿಂದ ನಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು. 
ಈ ವೇಳೆ ಮಾತನಾಡಿದ ಅನರ್ಹತೆ ಶಾಸಕರ ಪಟ್ಟಿಯಲ್ಲಿರುವ ಜರ್ನೈಲ್ ಸಿಂಗ್ ಅವರು, ಸಂಸದೀಯ ಕಾರ್ಯದರ್ಶಿಯಾಗಿ ನಾವು ಸರ್ಕಾರದಿಂದ ಒಂದೇ ಒಂದು ರುಪಾಯಿ ವೇತನ ಅಥವಾ ಮನೆ, ಕಾರು ಪಡೆದಿದ್ದರೆ ಚುನವಣಾ ಆಯೋಗ ಅದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು. ಈ ಸಂಬಂಧ ನಾವು ಯಾವುದೇ ಕೋರ್ಟ್ ಗೆ ಹೋಗಲು ನಾವು ಸಿದ್ಧ ಎಂದರು.
ಚುನಾವಣಾ ಆಯೋಗ ನಿನ್ನೆ ಲಾಭದಾಯಕ ಹುದ್ದೆ ಹೊಂದಿದ ಆರೋಪದ ಮೇಲೆ 20 ಎಎಪಿ ಶಾಸಕರನ್ನು ಅನರ್ಹಗೊಳಿಸುವಂತೆ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರಿಗೆ ಶಿಫಾರಸು ಮಾಡಿದೆ. ಇದನ್ನು ಪ್ರಶ್ನಿಸಿ ಆಪ್ ಶಾಸಕರು ದೆಹಲಿ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದು, ಹೈಕೋರ್ಟ್ ಆಯೋಗದಿಂದ ವರದಿ ಕೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com