ನಾಲ್ಕು ರಾಜ್ಯಗಳ ಮಲ್ಟಿಫ್ಲೆಕ್ಸ್ ಗಳಲ್ಲಿ 'ಪದ್ಮಾವತ್' ಪ್ರದರ್ಶನವಿಲ್ಲ, ಮಲ್ಟಿಫ್ಲೆಕ್ಸ್ ಅಸೋಸಿಯೇಷನ್ ತೀರ್ಮಾನ

ರಾಜಸ್ಥಾನ, ಹರಿಯಾಣ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಸಂಜಯ್ ಲೀಲಾ ಭನ್ಸಾಲಿ 'ಪದ್ಮಾವತ್' ಬಿಡುಗಡೆಯ ಒಂದು ದಿನದ ಮುನ್ನವೇ ತೀವ್ರ ತರದ...
ಪದ್ಮಾವತ್ ವಿವಾದ: ನಾಲ್ಕು ರಾಜ್ಯಗಳ ಮಲ್ಟಿಫ್ಲೆಕ್ಸ್ ಗಳಲ್ಲಿ ಚಿತ್ರ ಪ್ರದರ್ಶನವಿಲ್ಲ, ಮಲ್ಟಿಫ್ಲೆಕ್ಸ್ ಅಸೋಸಿಯೇಷನ್ ತೀರ್ಮಾನ
ಪದ್ಮಾವತ್ ವಿವಾದ: ನಾಲ್ಕು ರಾಜ್ಯಗಳ ಮಲ್ಟಿಫ್ಲೆಕ್ಸ್ ಗಳಲ್ಲಿ ಚಿತ್ರ ಪ್ರದರ್ಶನವಿಲ್ಲ, ಮಲ್ಟಿಫ್ಲೆಕ್ಸ್ ಅಸೋಸಿಯೇಷನ್ ತೀರ್ಮಾನ
ಜೈಪುರ: ರಾಜಸ್ಥಾನ, ಹರಿಯಾಣ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿ  ಸಂಜಯ್ ಲೀಲಾ ಭನ್ಸಾಲಿ 'ಪದ್ಮಾವತ್' ಬಿಡುಗಡೆಯ ಒಂದು ದಿನದ ಮುನ್ನವೇ ತೀವ್ರ ತರದ ಪ್ರತಿಭಟನೆಗಳು ನಡೆದಿದೆ.
ಹರಿಯಾಣದ ಗುರುಗ್ರಾಮದಲ್ಲಿ ತೀವ್ರ ತರ ಪ್ರತಿಭಟನೆ ನಡೆದಿದ್ದು ಪ್ರತಿಭಟನಾ ಕಾರರು ಒಂದು ಬಸ್ ಗೆ ಬೆಂಕಿ ಹಚ್ಚಿದ್ದಾರೆ, ಹೆದ್ದಾರಿ ತಡೆ ನಡೆಸಿದ್ದಾರೆ. ಉತ್ತರ ಪ್ರದೇಶದ ಲಖನೌ ದಲ್ಲಿ ಸಹ ಪದ್ಮಾವತ್ ಬಿಡುಗಡೆ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿದ್ದು ಪ್ರತಿಭಟನಾಕಾರರನ್ನು ಚದುರಿಸಲು ಪೋಲೀಸರು ಬಲಪ್ರಯೋಗ ನಡೆಸಬೇಕಾಯಿತು. ರಾಜಸ್ಥಾನದ ಜೈಪುರದಲ್ಲಿ ಕರ್ಣಿ ಸೇನೆ ಕಾರ್ಯಕರ್ತರು ಎರಡು ರಾಜ್ಯ ಸರ್ಕಾರಿ ಬಸ್ ಗಳನ್ನು ಜಖಂ ಗೊಳಿಸಿದ್ದಾರೆ. ಕಲ್ವಾರಾ ಪ್ರದೇಶದಲ್ಲಿ ರಸ್ತೆ ತಡೆ ನಡೆಸಿದ್ದಾರೆ. ಇನ್ನು ಮಹಾರಾಷ್ಟ್ರದ ನಾಸಿಕ್ ಹಾಗೂ ಮುಂಬೈನಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ಕರ್ಣಿ ಸೇನಾ ಬೆಂಬಲಿಗರನ್ನು ಪೋಲೀಸರು ಬಂಧಿಸಿದ್ದಾರೆ. 
ಏತನ್ಮಧ್ಯೆ, ಗುಜರಾತಿನ ಅಹಮದಾಬಾದ್ ನಲ್ಲಿ ಕಳೆದ ರಾತ್ರಿ ಮಾಲ್ ಗಳ ಹೊರಗೆ ಹಿಂಸಾಚಾರ ಮತ್ತು ವಿದ್ವಂಸಕ ಕೃತ್ಯ ನಡೆಸುತ್ತಿದ್ದ  50 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ನಗರದಲ್ಲಿನ ಮೂರು ಮಲ್ಟಿಪ್ಲೆಕ್ಸ್ ಗಳ ಹೊರಗಡೆ ನಿಲ್ಲಿಸಲಾಗಿದ್ದ 30 ಕ್ಕೂ ಹೆಚ್ಚು ದ್ವಿಚಕ್ರ ವಾಹನ ಮತ್ತು ಸ್ಕೂಟರ್ ಗಳನ್ನು ಪ್ರತಿಭಟನಾಕಾರರು ಹಾನಿಗೊಳಿಸಿದ್ದಾರೆ. ಇದೇ ವೇಳೆ ರಾಜಸ್ಥಾನ, ಮದ್ಯಪ್ರದೇಶ, ಗೋವಾ, ಮಹಾರಾಷ್ಟ್ರಗಳಲ್ಲಿ ಯಾವ ಮಲ್ಟಿಫ್ಲೆಕ್ಸ್ ಗಳಲ್ಲಿಯೂ ಪದ್ಮಾವತ್ ಚಿತ್ರ ಪ್ರದರ್ಶನಗೊಳ್ಳುವುದಿಲ್ಲ ಎಂದು ಮಲ್ಟಿಫ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಹೇಳಿದೆ.
"ಆಯಾ ರಾಜ್ಯಗಳ ಕಾನೂನು ಸುವ್ಯವಸ್ಥೆಗೆ ಧಕ್ಕೆಯೊದಗುವ ಸಂಭವವಿರುವ ಹಿನ್ನೆಲೆಯಲ್ಲಿ ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ರಾಜಸ್ಥಾನದ ಮಾಲ್ ಗಳಲ್ಲಿ ಪದ್ಮಾವತ್ ಪ್ರದರ್ಶನ ಮಾಡದಿರಲು ನಾವು ನಿರ್ಧರಿಸಿದ್ದೇವೆ"  ಎಂದು  ಅಸೋಸಿಯೇಷನ್ ಪಿಟಿಐ ಗೆ ತಿಳಿಸಿದೆ.
ಗುಜರಾತ್ ನಲ್ಲಿ ಸಹ ಯಾವ ಮಲ್ಟಿಫ್ಲೆಕ್ಸ್ ನಲ್ಲಿಯೂ , ಇತರೆ ಚಿತ್ರಮಂದಿರಗಳಲ್ಲಿಯೂ ಪದ್ಮಾವತ್ ಪ್ರದರ್ಶನವಿರುವುದಿಲ್ಲ ಎಂದು ಅಲ್ಲಿನ ಚಿತ್ರಮಂದಿರದ ಮಾಲೀಕರು ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ಸಹ ಕರ್ಣಿ ಸೇನಾ ಬೆಂಬಲಿಗರು ಪದ್ಮಾವತ್ ಬಿಡುಗಡೆ ವಿರುದ್ಧ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಮುಂಬೈ-ಆಗ್ರಾ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 3ನ್ನು ತಡೆದ ಪ್ರತಿಭಟನಾಕಾರರು ರಸ್ತೆ ತುಂಬಾ  ಗಾಜಿನ ಬಾಟಲಿಗಳನ್ನು ಒಡೆದು ಹಾಕಿದ್ದಾರೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ಒಟ್ಟಾರೆ ನಾಳೆ (ಜ.25) ಬಿಡುಗಡೆ ಕಾಣುತ್ತಿರುವ ಸಂಜಯ್ ಲೀಲಾ ಭನ್ಸಾಲಿ ಚಿತ್ರ ಪದ್ಮಾವತ್ ಗೆ ದೇಶದಾದ್ಯಂತ ವ್ಯಾಪಕ ಪ್ರತಿಭಟನೆಗಳು ವ್ಯಕ್ತವಾಗುತ್ತಿದ್ದು ಚಿತ್ರ ಬಿಡುಗಡೆಯಾದ ಬಳಿಕ ಪರಿಸ್ಥಿತಿ ಸುಧಾರಿಸಲಿದೆಯೆ ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com