ನವದೆಹಲಿ: ದೇಶದಲ್ಲಿ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಸುಧಾರಣೆಯಾಗಬೇಕೆಂದು ಆದೇಶ ಹೊರಡಿಸಿರುವ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಯಾವುದೇ ಪೊಲೀಸ್ ಅಧಿಕಾರಿಯನ್ನು ತಾತ್ಕಾಲಿಕ ಪೊಲೀಸ್ ಮಹಾ ನಿರ್ದೇಶಕರಾಗಿ ನೇಮಿಸಬಾರದೆಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ, ಎಲ್ಲಾ ರಾಜ್ಯ ಸರ್ಕಾರಗಳು ಸಂಭಾವ್ಯ ಡಿಜಿಪಿ ಅಥವಾ ಪೊಲೀಸ್ ಆಯುಕ್ತರಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರುಗಳನ್ನು ಯುಪಿಎಸ್ ಸಿಗೆ ಕಳುಹಿಸಿಕೊಡುವಂತೆ ಸೂಚಿಸಿದೆ.
ಇದಕ್ಕೆ ಪ್ರತಿಯಾಗಿ ಯುಪಿಎಸ್ ಸಿ ಅತಿ ಹೆಚ್ಚು ಸೂಕ್ತ ಮೂವರು ಅಧಿಕಾರಿಗಳ ಪಟ್ಟಿಯನ್ನು ತಯಾರಿಸಿ ಅವರಲ್ಲಿ ಒಬ್ಬರನ್ನು ಪೊಲೀಸ್ ಮುಖ್ಯಸ್ಥರನ್ನಾಗಿ ನೇಮಿಸುವ ಅಧಿಕಾರ ರಾಜ್ಯಗಳಿಗಿರುತ್ತವೆ ಎಂದು ಎ ಎಮ್ ಖಾನ್ವಿಲ್ಕರ್ ಮತ್ತು ಡಿ ವೈ ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
ಡಿಜಿಪಿಯಾಗಿ ನೇಮಕಗೊಂಡ ಪೊಲೀಸ್ ಅಧಿಕಾರಿ ನಿರ್ದಿಷ್ಟ ವರ್ಷಗಳ ಕಾಲ ಸೇವೆ ಸಲ್ಲಿಸುವ ಕಾಲಾವಧಿಯನ್ನು ಹೊಂದಿರಬೇಕು. ಪೊಲೀಸ್ ಅಧಿಕಾರಿಯ ನೇಮಕಾತಿ ಬಗ್ಗೆ ಯಾವುದೇ ಕಾನೂನು ಮತ್ತು ನಿಯಮವನ್ನು ಸ್ಥಗಿತಗೊಳಿಸಬೇಕು ಎಂದು ಕೂಡ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಪೊಲೀಸ್ ಇಲಾಖೆಯಲ್ಲಿ ಸುಧಾರಣೆ ತರಬೇಕೆಂದು ಪ್ರಕಾಶ್ ಸಿಂಗ್ ಪ್ರಕರಣದಲ್ಲಿ ಮಂಡಿಸಲಾಗಿದ್ದ ತೀರ್ಪಿನಲ್ಲಿ ಬದಲಾವಣೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್ ಇಂದು ಆದೇಶ ನೀಡಿದೆ.