ಕೊಚ್ಚಿನ್(ಕೇರಳ): ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾಗಿರುವ ಮಲಂಕರ ಸಿರಿಯನ್ ಆರ್ಥೋಡಾಕ್ಸ್ ಚರ್ಚ್ ಗೆ ಸೇರಿದ್ದ ಪಾದ್ರಿಗಳ ಬಂಧನಕ್ಕೆ ತಡೆ ನಿಡಲು ಕೇರಳ ಹೈಕೋರ್ಟ್ ನಿರಾಕರಿಸಿದೆ.
ಪಾದ್ರಿಗಳಾದ ಫಾದರ್ ಸೋನಿ ವರ್ಗೀಸ್ (ಅಬ್ರಹಾಂ ವರ್ಗೀಸ್), ಫಾದರ್ ಜಾಬ್ ಮ್ಯಾಥ್ಯೂ ಅವರುಗಳ ಬಂಧನಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದೆ.
ಸೋಮವಾರ ರಾಜ್ಯ ಸರ್ಕಾರ ಈ ಪ್ರಕರಣವನ್ನು ನ್ಯಾಯಾಲಯದ ಮುಂದೆ ತಂದಿದ್ದು ಸರ್ಕಾರವು ಪ್ರಕರಣ ಬಹಳ ಗಂಭೀರವಾದದ್ದು ಸಂತ್ರಸ್ತೆ ಹಾಗೂ ಆಕೆಯ ಪತಿ ಹೇಳಿಕೆಗಳ ಆಧಾರದಲ್ಲಿ ಪಾದ್ರಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ವಿವರಣೆ ನಿಡಿದೆ.
ಫಾದರ್ ಸೋನಿ ವರ್ಗೀಸ್ (ಅಬ್ರಹಾಂ ವರ್ಗೀಸ್), ಫಾದರ್ ಜಾಬ್ ಮ್ಯಾಥ್ಯೂ, ಫಾದರ್ ಜಾನ್ಸನ್ ವಿ. ಮ್ಯಾಥ್ಯೂ ಹಾಗೂ ಫಾದರ್ ಜೈಸ್ ಕೆ. ಜಾರ್ಜ್ ಅವರುಗಳ ವಿರುದ್ಧ ಕೇರಳ ಕ್ರೈಂ ಬ್ರ್ಯಾಂಚ್ ಪೋಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಪ್ರಕರಣದ ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಹೀಗಾಗಿ ಅರ್ಜಿದಾರರನ್ನು ಬಂಧಿಸಿ ವಿಚಾರಣೆ ನಡೆಸಲು ಅನುಮತಿ ನೀಡಬೇಕೆಂದು ಪ್ರಾಸಿಕ್ಯೂಷನ್ ವಾದ ಮಂಡಿಸಿತ್ತು.
ಪಾದ್ರಿಗಳು ಹೇಳುವಂತೆ ಸಂತ್ರಸ್ತೆಯು 17 ವರ್ಷಕ್ಕೆ ಮೇಲ್ಪಟ್ಟವಳು ಆಕೆಯ ಸಮ್ಮತಿಯಂತೆ ಇದೀ ಘಟನೆ ನಡೆದಿದೆ. ಇದರಲ್ಲಿ ಅಕ್ರಮ ಲೈಂಗಿಕ ಸಂಬಂಧದ ಆರೋಪಕ್ಕೆ ಯಾವ ಆಧಾರವಿಲ್ಲ
ಕೆಲವು ರಾಜಕೀಯ ಹಿತಾಸಕ್ತಿಗಳಿಗಾಗಿ ತಮ್ಮ ಮೇಲೆ ಈ ಆರೋಪ ಹೊರಿಸಲಾಗಿದೆ.ಎಂದು ಅವರು ಆರೋಪಿಸಿದ್ದಾರೆ.