ರಾಯಪುರ್: ಛತ್ತೀಸ್ ಗಢ ವಿಧಾನಸಭೆಯಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಶನಿವಾರ ಮತ್ತೆ ಸೋಲಾಗಿದೆ.
ಮುಂಗಾರು ಅಧಿವೇಶನದಲ್ಲಿ ಮುಖ್ಯಮಂತ್ರಿ ರಮಣ್ ಸಿಂಗ್ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ನಿನ್ನೆ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಸುಮಾರು 15 ಗಂಟೆಗಳ ಕಾಲ ಚರ್ಚೆಯ ಬಳಿಕ ನಿರ್ಣಯವನ್ನು ಇಂದು ಧ್ವನಿ ಮತದ ಮೂಲಕ ತಿರಸ್ಕರಿಸಲಾಗಿದೆ.
ಕಳೆದ ಡಿಸೆಂಬರ್ ನಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲೂ ರಮಣ್ ಸಿಂಗ್ ಅವರ ವಿರುದ್ಧ ಕಾಂಗ್ರೆಸ್ ಪ್ರಾಯೋಜಿತ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು. 19 ಗಂಟೆಗಳ ಚರ್ಚೆಯ ಬಳಿಕ ನಿರ್ಣಯಕ್ಕೆ ಸೋಲಾಗಿತ್ತು.
90 ಸದಸ್ಯ ಬಲ ಹೊಂದಿರುವ ಛತ್ತೀಸ್ ಗಢ ವಿಧಾನಸಭೆಯಲ್ಲಿ ಬಿಜೆಪಿ 49 ಹಾಗೂ ಪ್ರತಿಪಕ್ಷ ಕಾಂಗ್ರೆಸ್ 39 ಶಾಸಕರನ್ನು ಹೊಂದಿವೆ.
ವಿಶ್ವಾಸಮತ ಗೆದ್ದ ಬಳಿಕ ಪ್ರತಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ರಮಣ್ ಸಿಂಗ್ ಅವರು, ಒಂದು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ ಎಂದರು.