ಸಂಸತ್ತಿನ ಶಿಷ್ಟಾಚಾರ ಕಾಪಾಡಲು ಲೋಕಸಭಾಧ್ಯಕ್ಷೆ ಸಂಸದರಿಗೆ ಕರೆ

ಸಂಸತ್ತಿನ ಕಲಾಪದ ವೇಳೆ ಎರಡೂ ಸದನಗಳಲ್ಲಿ ಯಾವುದೇ ಗಂಭೀರ ಚರ್ಚೆಯಾಗದೆ ಪದೇ ಪದೇ ...
ಸುಮಿತ್ರಾ ಮಹಾಜನ್
ಸುಮಿತ್ರಾ ಮಹಾಜನ್

ನವದೆಹಲಿ: ಸಂಸತ್ತಿನ ಕಲಾಪದ ವೇಳೆ ಎರಡೂ ಸದನಗಳಲ್ಲಿ ಯಾವುದೇ ಗಂಭೀರ ಚರ್ಚೆಯಾಗದೆ ಪದೇ ಪದೇ ಮುಂದೂಡಿಕೆಯಾಗುತ್ತಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಕೆಳಮನೆಯ ಎಲ್ಲಾ ಸಂಸದರಿಗೆ ಪತ್ರ ಬರೆದಿದ್ದಾರೆ.

16ನೇ ಲೋಕಸಭೆಯ ಕಲಾಪದಲ್ಲಿ ಕೆಲವು ಸಂಸದರು ಲೋಕಸಭೆಯ ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗಿ ಬ್ಯಾನರ್, ಭಿತ್ತಿಪತ್ರಗಳನ್ನು ತೋರಿಸಿ ಗದ್ದಲವೆಬ್ಬಿಸಿ ಕಲಾಪ ಮುಂದುವರಿಯಲು ತೀವ್ರ ಅಡ್ಡಿಯನ್ನುಂಟುಮಾಡಿದ್ದರು. ಇದರಿಂದ ಕಲಾಪ ಮುಂದುವರಿಸಲಾಗದೆ ಅನಿವಾರ್ಯವಾಗಿ ಮುಂದೂಡಬೇಕಾಯಿತು ಎಂದು ಲೋಕಸಭಾಧ್ಯಕ್ಷೆ ಹೇಳಿದ್ದಾರೆ.

ಸದಸ್ಯರಲ್ಲಿ ಚರ್ಚೆ, ಆಕ್ಷೇಪಗಳು, ಭಿನ್ನಾಭಿಪ್ರಾಯಗಳೇನಿದ್ದರೂ ಕಲಾಪದಲ್ಲಿ ಸದನದ ಕಾರ್ಯವ್ಯವಸ್ಥೆಯೊಳಗೆ ಸ್ವೀಕರಿಸುವ ಮಾದರಿಯಲ್ಲಿರಬೇಕು. ಸಂಸತ್ತಿನ ಗೌರವ, ಘನತೆಗಳನ್ನು ಸದಸ್ಯರು ಎತ್ತಿಡಿದು ಶಿಷ್ಟಾಚಾರ ಮತ್ತು ಸಭ್ಯತೆಗಳನ್ನು ಕಾಪಾಡಬೇಕು. ಇದರಿಂದ ನಮ್ಮನ್ನು ಗಮನಿಸುತ್ತಿರುವ ದೇಶದ ಜನತೆಗೆ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳ ಮೇಲೆ ನಂಬಿಕೆ ಹಾಗೂ ವಿಶ್ವಾಸ ಮೂಡುತ್ತದೆ ಎಂದು ಪತ್ರದಲ್ಲಿ ನಮೂದಿಸಿದ್ದಾರೆ.

ಪದೇ ಪದೇ ಸದನದಲ್ಲಿ ಕಲಾಪಗಳಿಗೆ ಅಡ್ಡಿ ಉಂಟುಮಾಡುತ್ತಿದ್ದರೆ ಪ್ರಜಾಪ್ರಭುತ್ವ ದೇಶವಾದ ಭಾರತದ ಸರ್ಕಾರದ ಸರಿಯಾದ ಆಡಳಿತ ನಡೆಸಲು ಸಾಧ್ಯವಾಗುವುದಿಲ್ಲ. ಸದನದ ಕಲಾಪ ಫಲಪ್ರದವಾಗುವುದಿಲ್ಲ. ಇತ್ತೀಚೆಗೆ ನಾನು ವಿದೇಶಕ್ಕೆ ಪ್ರವಾಸ ಹೋಗಿದ್ದಾಗ ಭಾರತೀಯ ವಿದೇಶಿ ಪ್ರಜೆಗಳು ಮತ್ತು ಇತರ ವಿದೇಶಗಳ ಗಣ್ಯರು ಸಹ ಸದನಗಳಲ್ಲಿ ಪದೇ ಪದೇ ಗದ್ದಲವುಂಟಾಗಿ ಕಲಾಪ ಸುಗಮವಾಗಿ ನಡೆಯುತ್ತಿಲ್ಲದ್ದರ ಬಗ್ಗೆ ಅಸಮಾಧಾನ ಹಾಗೂ ಬೇಸರ ಹೊರಹಾಕಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಇದರ ಬಗ್ಗೆ ವ್ಯತಿರಿಕ್ತ ಅಭಿಪ್ರಾಯ ಮೂಡುತ್ತವೆ ಎಂದು ಸುಮಿತ್ರಾ ಮಹಾಜನ್ ಪತ್ರದಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಇನ್ನು ಮುಂದೆಯಾದರೂ ಸಂಸತ್ತಿನ ಸದಸ್ಯರು ಗೌರವ, ಘನತೆಗಳಿಂದ ನಡೆದುಕೊಂಡು ಸುಗಮನಾಗಿ ಕಲಾಪ ನಡೆಯಲು ಸಹಕರಿಸಬೇಕೆಂದು ಕೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com