'ಹಿಂದೂ ಪಾಕಿಸ್ತಾನ' ಹೇಳಿಕೆ ಹಿಂಪಡೆಯಲ್ಲ: ಶಶಿ ತರೂರ್

ದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಭಾರತ ಹಿಂದೂ ಪಾಕಿಸ್ತಾನವಾಗಲಿದೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ...
ಶಶಿ ತರೂರ್
ಶಶಿ ತರೂರ್
ನವದೆಹಲಿ: ದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಭಾರತ ಹಿಂದೂ ಪಾಕಿಸ್ತಾನವಾಗಲಿದೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿರುವ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅವರು, ತಾವು ನೀಡಿದ ಯಾವುದೇ ಹೇಳಿಕೆಯನ್ನು ಹಿಂಪಡೆಯಲ್ಲ ಎಂದು ಬುಧವಾರ ಹೇಳಿದ್ದಾರೆ. ಅಲ್ಲದೆ ತಮ್ಮ ಕಚೇರಿ ಮೇಲೆ ದಾಳಿ ನಡೆಸಿದವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. 
ಇಂದು ಸಂಸತ್ ಭವನದ ಹೊರಗೆ ಹಿಂದೂ ಪಾಕಿಸ್ತಾನ ಹೇಳಿಕೆ ನೀಡುವ ಮೂಲಕ ದೇಶ ಇಬ್ಭಾಗ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಬಿಜೆಪಿ ಆರೋಪದ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ತರೂರ್, ಭಾರತವನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸಿದರೆ ಅದು ದೇಶ ಇಬ್ಭಾಗಕ್ಕೆ ಕಾರಣವಾಗಹುದು ಎಂದಿದ್ದಾರೆ.
ಒಂದು ವೇಳೆ ಎಲ್ಲರೂ ಒಟ್ಟಿಗೆ ಬಾಳಲು ಸಾಧ್ಯವಾದರೆ ದೇಶ ಹೇಗೆ ಇಬ್ಭಾಗವಾಗುತ್ತದೆ ಎಂದು ಪ್ರಶ್ನಿಸಿದ ತರೂರ್, ನಾನು ನನ್ನ ಹೇಳಿಕೆಯನ್ನು ಹಿಂಪಡೆಯುವುದಿಲ್ಲ ಮತ್ತು ನನ್ನ ಕಚೇರಿ ಮೇಲೆ ದಾಳಿ ನಡೆಸಿದ ಬಿಜೆಪಿ ಕಾರ್ಯಕರ್ತರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮತ್ತೆ ಅಧಿಕಾರಕ್ಕೆ ಬಂದರೆ ಭಾರತ ಹಿಂದೂ ಪಾಕಿಸ್ತಾನವಾಗಲಿದೆ ಮತ್ತು ಸಂವಿಧಾನವನ್ನು ಬದಲಿಸುವ ಮೂಲಕ ಅಲ್ಪ ಸಂಖ್ಯಾತರನ್ನು ಕಡೆಗಣಿಸುತ್ತಾರೆ ಎಂದು ಶಶಿ ತರೂರ್ ಆರೋಪಿಸಿದ್ದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ತಿರುವನಂತಪುರದಲ್ಲಿರುವ ತರೂರ್ ಅವರ ಕಚೇರಿ ಮೇಲೆ ದಾಳಿ ನಡೆಸಿ, ಕಪ್ಪು ಬಾವುಟ ಪ್ರದರ್ಶಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com