ಯೋಗಿ ಆದಿತ್ಯನಾಥ್
ದೇಶ
ಫುಡ್ ಪಾರ್ಕ್ ಯೋಜನೆ: ಪತಂಜಲಿ ಸಿಇಒ ಜತೆ ಉತ್ತರ ಪ್ರದೇಶ ಸಿಎಂ ಮಾತುಕತೆ
ಯೋಗ ಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆಯು ತನ್ನ ಮೆಗಾ ಫುಡ್ ಪಾರ್ಕ್....
ನವದೆಹಲಿ: ಯೋಗ ಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆಯು ತನ್ನ ಮೆಗಾ ಫುಡ್ ಪಾರ್ಕ್ ಯೋಜನೆ ಸ್ಥಳಾಂತರಿಸುವ ಎಚ್ಚರಿಕೆ ನೀಡಿದ ಬೆನ್ನಲ್ಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪತಂಜಲಿ ಸಿಇಒ ಆಚಾರ್ಯ ಬಾಲಕೃಷ್ಣ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಪತಂಜಲಿಯ ಆರು ಸಾವಿರ ಕೋಟಿ ರುಪಾಯಿಯ ಫುಡ್ ಪಾರ್ಕ್ ಸ್ಥಾಪಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ.
ಫುಡ್ ಪಾರ್ಕ್ ಯೋಜನೆ ರದ್ದುಗೊಂಡಿಲ್ಲ. ಯೋಜನೆಗೆ ಸಂಬಂಧಿಸಿದಂತೆ ಸಿಎಂ ಯೋಗಿ ಆದಿತ್ಯನಾಥ್ ಅವರು ಆಚಾರ್ಯ ಬಾಲಕೃಷ್ಣ ಅವರೊಂದಿಗೆ ಮಾತನಾಡಿದ್ದರೆ ಎಂದು ರಾಜ್ಯ ಸರ್ಕಾರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ಆಚಾರ್ಯ ಬಾಲಕೃಷ್ಣ ಅವರೊಂದಿಗೆ ಮಾತನಾಡಿದ್ದು, ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ. ಇನ್ನು ಯೋಜನೆ ರದ್ದಾಗಿಲ್ಲ. ಈಗಾಗಲೇ ಯೋಜನೆಗೆ ಭೂಮಿ ನೀಡಲಾಗಿದ್ದು, ಫುಡ್ ಪಾರ್ಕ್ ಸ್ಥಾಪನೆ ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವನಿಶ್ ಅವಸ್ಥಿ ಅವರು ಪಿಟಿಐಗೆ ತಿಳಿಸಿದ್ದಾರೆ.
ಗ್ರೇಟರ್ ನೊಯ್ದಾ ಪ್ರದೇಶದಲ್ಲಿ ಸುಮಾರು 450 ಎಕರೆ ಪ್ರದೇಶದಲ್ಲಿ 6000 ಕೋಟಿ ರು. ವೆಚ್ಚದಲ್ಲಿ ಫುಡ್ ಪಾರ್ಕ್ ನ್ನು ನಿರ್ಮಿಸಲು ಪತಂಜಲಿ ಸಂಸ್ಥೆ ನಿರ್ಧರಿಸಿತ್ತು. ಇದಕ್ಕಾಗಿ ನವೆಂಬರ್ 2016ರಲ್ಲಿ ಅಖಿಲೇಶ್ ಯಾದವ್ ಸರ್ಕಾರ ಪತಂಜಲಿ ಸಂಸ್ಥೆಗೆ ಯಮುನಾ ಎಕ್ಸ್ ಪ್ರೆಸ್ ವೇ ಬಳಿ 450 ಎಕರೆ ಭೂಮಿಯನ್ನೂ ಮಂಜೂರು ಮಾಡಿತ್ತು. ಈ ನಡುವೆ ಯೋಜನೆ ಜಾರಿಯಾಗುವುದಕ್ಕೂ ಮುನ್ನ ಯೋಗಿ ಆದಿತ್ಯನಾಥ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಉತ್ತರ ಪ್ರದೇಶ ಸರ್ಕಾರ ಯೋಜನೆ ಬಗ್ಗೆ ಉದಾಸೀನತೆ ತೋರುತ್ತಿದೆ ಎಂದು ಪತಂಜಲಿ ಸಿಇಒ ಆಚಾರ್ಯ ಬಾಲಕೃಷ್ಣ ಆರೋಪಿಸಿದ್ದರು ಮತ್ತು ಪತಂಜಲಿ ಸಂಸ್ಥೆ ಪ್ರಸ್ತಾವಿತ ಯೋಜನೆಯನ್ನು ಉತ್ತರ ಪ್ರದೇಶದಿಂದ ಸ್ಥಳಾಂತರಿಸಲು ನಿರ್ಧರಿಸಿದೆ ಎಂದು ಟ್ವೀಟ್ ಮಾಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ