ನವದೆಹಲಿ: ಕೈರಾನ ಉಪಚುನಾವಣೆಯ ವೇಳೆ ಅತಿಯಾದ ಬೆಳಕು ಬಿದ್ದದ್ದೇ ವಿವಿಪ್ಯಾಟ್ ಅಸಮರ್ಪಕ ಕಾರ್ಯನಿರ್ವಹಣೆ ಮಾಡುವುದಕ್ಕೆ ಕಾರಣವಾಗಿರಬಹುದು ಎಂದು ಚುನಾವಣಾ ಆಯೋಗ ಹೇಳಿದೆ.
ಚುನಾವಣಾ ಆಯೋಗದ ಎರಡು ತಂಡಗಳು ನೀಡಿರುವ ವರದಿಯನ್ನು ಆಧರಿಸಿ ಆಯೋಗ ಹೇಳಿಕೆ ನೀಡಿದ್ದು, ಕಾಂಟ್ರಾಸ್ಟ್ ಸಂವೇದಕಗಳು ಹಾಗೂ ಲೆಂತ್ ಸಂವೇದಕಗಳ ವೈಫಲ್ಯ ಮೇ.28 ರಂದು ನಡೆದ ಲೋಕಸಭಾ ಉಪಚುನಾವಣೆಯಲ್ಲಿ ವಿವಿಪ್ಯಾಟ್ ಯಂತ್ರದ ಅಸಮರ್ಪಕ ಕಾರ್ಯನಿರ್ವಹಣೆಗೆ ತಾಂತ್ರಿಕ ಕಾರಣ ಎಂದು ಹೇಳಿದೆ.
ಮತಗಟ್ಟೆಯಲ್ಲಿ ಅತಿ ಹೆಚ್ಚು ಬೆಳಕು ಬಿದ್ದರೆ ಈ ರೀತಿಯ ತಾಂತ್ರಿಕ ದೋಷಗಳು ಉಂಟಾಗುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗ ತನ್ನ ಹೇಳಿಕೆಯಲ್ಲಿ ಹೇಳಿದೆ. ಮುಂದಿನ ದಿನಗಳಲ್ಲಿ ಈ ರೀತಿ ಹೆಚ್ಚು ಬೆಳಕು ಬಿದ್ದರೂ ಸಹ ತಾಂತ್ರಿಕ ದೋಷ ಎದುರಾಗದಂತೆ ಯಂತ್ರಗಳನ್ನು ಆಧುನೀಕರಣಗೊಳಿಸಲು ವಿವಿಪ್ಯಾಟ್ ಯಂತ್ರಗಳನ್ನು ತಯಾರಿಸುವ ಇಸಿಐಎಲ್ ಹಾಗೂ ಬಿಇಎಲ್ ಸಂಸ್ಥೆಗಳಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ.