ಅರವಿಂದ್ ಕೇಜ್ರಿವಾಲ್
ದೇಶ
ಆಪ್-ಲೆಫ್ಟಿನೆಂಟ್ ಗವರ್ನರ್ ಬಿಕ್ಕಟ್ಟು: 9 ದಿನಗಳ ಕೇಜ್ರಿವಾಲ್ ಧರಣಿ ಅಂತ್ಯ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಕಳೆದ ಒಂಬತ್ತು ದಿನಗಳಿಂದ...
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಕಳೆದ ಒಂಬತ್ತು ದಿನಗಳಿಂದ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಕಚೇರಿಯಲ್ಲಿ ನಡೆಸುತ್ತಿದ್ದ ಧರಣಿಯನ್ನು ಮಂಗಳವಾರ ಅಂತ್ಯಗೊಳಿಸಿದ್ದಾರೆ.
ತುರ್ತುಗಾಗಿ ಐಎಎಸ್ ಅಧಿಕಾರಿಗಳನ್ನು ಭೇಟಿ ಮಾಡಿ, ಮಾತುಕತೆ ಮೂಲಕ ಇಬ್ಬರ ನಡುವಿನ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಅನಿಲ್ ಬೈಜಾಲ್ ಅವರು ಸಿಎಂ ಕೇಜ್ರಿವಾಲ್ ಅವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಧರಣಿ ಹಿಂಪಡೆಯಲಾಗಿದೆ.
ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ಆಪ್ ನಾಯಕರು ಬೈಜಾಲ್ ಅವರ ತೀವ್ರ ವಾಗ್ದಾಳಿ ಮುಂದುವರೆಸಿದ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಮಧ್ಯ ಪ್ರದೇಶಿಸಿದ್ದಾರೆ.
ನಾನು ಕಳೆದ ಎಂಟು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದೇನೆ. ಆದರೆ ನನ್ನನ್ನು ಭೇಟಿ ಮಾಡಲು ಬೈಜಾಲ್ ಅವರಿಗೆ ಎಂಟು ನಿಮಿಷ ಸಮಯ ಇಲ್ಲ ಎಂದು ದೆಹಲಿ ಸಿಎಂ ಇಂದು ಬೆಳಗ್ಗೆಯಷ್ಟೇ ವಾಗ್ದಾಳಿ ನಡೆಸಿದ್ದರು.
ಗೌರವಾನ್ವಿತ ಲೆಫ್ಟಿನೆಂಟ್ ಗವರ್ನರ್ ಭೇಟಿಗಾಗಿ ಎಂಟು ದಿನಗಳಿಂದ ಕಾಯುತ್ತಿದ್ದೇವೆ. ಈ ವೇಳೆ ಉಪ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರು ಆನಾರೋಗ್ಯಕ್ಕಿಡಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೂ ಅವರಿಗೆ ನಮ್ಮನ್ನು ಭೇಟಿ ಮಾಡಲು ಎಂಟು ನಿಮಿಷ ಸಮಯ ಸಿಗುತ್ತಿಲ್ಲ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದರು.
ಈ ಸಂಬಂಧ ಆಮ್ ಆದ್ಮಿ ಪಕ್ಷ ಲೆಫ್ಟಿನೆಂಟ್ ಗವರ್ನರ್ ವಿರುದ್ಧ ಸಹಿ ಆಂದೋಲನ ಆರಂಭಿಸಲಿದೆ. ಸಹಿ ಮಾಡಿದ 10 ಲಕ್ಷ ಪತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಲಾಗುವುದಿ ಮತ್ತು ದೊಡ್ಡ ಪ್ರತಿಭಟನಾ ರ್ಯಾಲಿ ನಡೆಸುವುದಾಗಿ ಆಪ್ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರು ಎಚ್ಚರಿಸಿದ್ದರು.
ಐಎಎಸ್ ಅಧಿಕಾರಿಗಳು ಅಘೋಸಿತ ಮುಷ್ಕರ ಹಿಂಪಡೆಯುವಂತೆ ಲೆಫ್ಟಿನೆಂಟ್ ಗವರ್ನರ್ ಸೂಚಿಸಬೇಕು ಎಂದು ಒತ್ತಾಯಿಸಿ ಕೇಜ್ರಿವಾಲ್ ಅವರು ಕಳೆದ ಜೂನ್ 11ರಿಂದ ಧರಣಿ ನಡೆಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ