ನವದೆಹಲಿ: ಅವಕಾಶವಾದಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಮತ್ತು ಪೀಪಲ್ಸ್ ಡೆಮೊಕ್ರಟಿಕ್ ಪಾರ್ಟಿ(ಪಿಡಿಪಿ)ಯ ಮೈತ್ರಿಯಿಂದಾಗಿ ಜಮ್ಮು ಮತ್ತು ಕಾಶ್ಮೀರ ಹೊತ್ತಿ ಉರಿಯುವಂತಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಕಣಿವೆ ರಾಜ್ಯದ ಮೈತ್ರಿ ಸರ್ಕಾರದಿಂದ ಹೊರ ಬಂದ ಕೆಲವೇ ಗಂಟೆಗಳಲ್ಲಿ ಟ್ವೀಟ್ ಮಾಡಿದ ರಾಹಲ್ ಗಾಂಧಿ, ಕಾಶ್ಮೀರದಲ್ಲಿ ಹಲವು ಮುಗ್ಧರು, ವೀರ ಯೋಧರು ಸಾವನ್ನಪ್ಪುತ್ತಿದ್ದಾರೆ. ಕೇಂದ್ರ ಸರ್ಕಾರದಡಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದರೂ ಈ ಸಾವಿನ ಸರಣಿ ಮುಂದುವರೆಯಲಿದೆ ಎಂದಿದ್ದಾರೆ.
ಅಸಮರ್ಥತೆ, ದುರಹಂಕಾರ ಮತ್ತು ದ್ವೇಷದ ಮೈತ್ರಿ ಯಾವತ್ತೂ ಯಶಸ್ವಿಯಾಗುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಹೇಳಿದ್ದಾರೆ.
ಬಿಜೆಪಿ-ಪಿಡಿಪಿ ಸಮ್ಮಿಶ್ರ ಸರ್ಕಾರದ ವೇಳೆ ಹಲವು ಮುಗ್ಧ ನಾಗರಿಕರು ಮತ್ತು ವೀರ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ.