ನವದೆಹಲಿ: ಭಾರತೀಯ ಜನತಾ ಪಕ್ಷ(ಬಿಜೆಪಿ) ಮೂರು ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರದ ಸಮ್ಮಿಶ್ರ ಸರ್ಕಾರದಿಂದ ಹೊರ ಬರುವ ಮೂಲಕ ದಿಢೀರ್ ರಾಜಕೀಯ ಬೆಳವಣಿಗೆಗಳಿಗೆ ನಾಂದಿ ಹಾಡಿದೆ. ಆದರೆ ಬಿಜೆಪಿಯ ಈ ನಿರ್ಧಾರ ದಿಢೀರ್ ಅಲ್ಲ, ಇದಕ್ಕೆ ಹಲವು ವರ್ಷಗಳ ಅಸಮಾಧಾನ, ಭಿನ್ನಮತ ಕೂಡ ಸೇರಿದೆ.
ಮೂಲಗಳ ಪ್ರಕಾರ, ಇನ್ನು ಕೆಲವೇ ತಿಂಗಳಲ್ಲಿ ಪಿಡಿಪಿಯೇ ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಳ್ಳಲಿತ್ತು ಎನ್ನಲಾಗಿದೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ರಂಜಾನ್ ಕದನ ವಿರಾಮವನ್ನು ಮುಂದುವರೆಸಲು ನಿರಾಕರಿಸಿ, ಉಗ್ರರ ವಿರುದ್ಧ ಕಾರ್ಯಾಚರಣೆಗೆ ಆದೇಶಿಸಿದ್ದರು. ಆದರೆ ರಂಜಾನ್ ಕದನ ವಿರಾಮ ಮುಂದುವರೆಸುವಂತೆ ಹಂಗಾಮಿ ಮುಖ್ಯಮಂತ್ರಿ ಮೆಹಬೂಹ ಮುಫ್ತಿ ಅವರು ರಾಜನಾಥ್ ಸಿಂಗ್ ಅವರ ಮೇಲೆ ಒತ್ತಡ ಹಾಕಿದ್ದರು. ಕಾರ್ಯಾಚರಣೆ ವೇಳೆ ನಾಗರಿಕರು ಮೃತಪಟ್ಟರೆ ಕಣಿವೆ ರಾಜ್ಯದ ಸ್ಥಿತಿ ಸುಧಾರಿಸುವುದಿಲ್ಲ ಎಂದಿದ್ದರು. ರಾಜನಾಥ್ ಸಿಂಗ್ ಅವರು ಒತ್ತಡಕ್ಕೆ ಮಣಿಯದಿದ್ದರಿಂದ ಅಸಮಾಧಾನಗೊಂಡ ಪಿಡಿಪಿ ಸಮ್ಮಿಶ್ರ ಸರ್ಕಾರದಿಂದ ಹೊರ ಬರಲು ಮುಂದಾಗಿತ್ತು. ಈ ಸಂಬಂಧ ಪಿಡಿಪಿ ನಾಯಕರು ಕೆಲವೇ ದಿನಗಳಲ್ಲಿ ಸಭೆ ಸೇರಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದರು ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ಪಿಡಿಪಿಯೇ ಮೈತ್ರಿ ಮುರಿದುಕೊಂಡಿದ್ದರೆ ಬಿಜೆಪಿ ತೀವ್ರ ಮುಜುಗ ಅನುಭವಿಸುತ್ತಿತ್ತು. ಇದನ್ನು ಅರಿತ ಬಿಜೆಪಿ, ರಾಜಕೀಯ ಬೆಳವಣಿಗೆಯಲ್ಲಿ ಮೇಲುಗೈ ಸಾಧಿಸಲು ತಾನೇ ಮೊದಲು ಮೈತ್ರಿ ಮುರಿದುಕೊಳ್ಳುವ ನಿರ್ಧಾರಕ್ಕೆ ಬಂದಿತು ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.
ಸಮ್ಮಿಶ್ರ ಸರ್ಕಾರದಿಂದ ಹೊರ ಬಂದಿರುವ ಬಿಜೆಪಿ ಈಗ ಪಿಡಿಪಿಯ ವಿರುದ್ಧ ದೂರುಗಳ ಸರಮಾಲೆಯನ್ನೇ ನೀಡಿದೆ.
ಸರ್ಕಾರದ ನೇತೃತ್ವ ವಹಿಸಿದ್ದ ಪಿಡಿಪಿಯ ಅಸಹಕಾರದಿಂದ ಕಣಿವೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗಲಿಲ್ಲ. ಶಾಂತಿ, ಸುವ್ಯವಸ್ಥೆ ಕಾಪಾಡಲು ಕೇಂದ್ರ ಸರ್ಕಾರ ಭಾರಿ ಪ್ರಯತ್ನ ನಡೆಸಿತ್ತು. ಶಾಂತಿ ಮಾತುಕತೆಗೂ ಮುಂದಾಗಿತ್ತು. ಅಲ್ಲದೇ ರಂಜಾನ್ ಸಂದರ್ಭದಲ್ಲಿ ಕದನ ವಿರಾಮ ಘೋಷಣೆ ಮಾಡಿತ್ತು. ಆದರೆ ಪಿಡಿಪಿ ಇದ್ಯಾವುದಕ್ಕೂ ಬೆಂಬಲ ನೀಡಲಿಲ್ಲ. ರಂಜಾನ್ ಸಂದರ್ಭದಲ್ಲಿಯೇ ಉಗ್ರರು ಅಟ್ಟಹಾಸ ಮೆರೆದರು ಎಂದು ಬಿಜೆಪಿ ಆರೋಪಿಸಿದೆ.
ಪಿಡಿಪಿ ಸಮ್ಮಿಶ್ರ ಸರ್ಕಾರದ ಮೂಲ ತತ್ವಗಳಿಗೆ ಯಾವುದೇ ಧಕ್ಕೆ ಆಗದ ರೀತಿಯಲ್ಲಿ ಆಡಳಿತ ನಡೆಸುವುದಾಗಿ ಹೇಳಿತ್ತು. ಆದರೆ ಈಗ ಮಾತು ತಪ್ಪಿದೆ ಎಂದು ಬಿಜೆಪಿ ದೂರಿದೆ.
ಬುರ್ಹಾನ್ ವಾನಿ ಪ್ರಕರಣದಲ್ಲಿ ಪಿಡಿಪಿ ಪ್ರತ್ಯೇಕ ಧೋರಣೆ ತಳೆಯಿತು. ಅಲ್ಲದೇ ಸೇನಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ ಯುವಕರಿಗೆ ಕ್ಷಮಾದಾನ ನೀಡಲು ಪಿಡಿಪಿ ಮುಂದಾಗಿತ್ತು ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಎಲ್ಲದ್ದಕ್ಕೂ ಮುಖ್ಯವಾಗಿ ರಾಷ್ಟ್ರೀಯ ಹಿತಾಸಕ್ತಿಯನ್ನು ಬದಿಗೊತ್ತಿದ್ದ ಪಿಡಿಪಿಯ ನಿರ್ಧಾರ ಸಮರ್ಥನೀಯವಲ್ಲ ಎಂದು ಬಿಜೆಪಿ ಬೆಂಬಲ ಹಿಂಪಡೆಯುವ ನಿರ್ಧಾರಕ್ಕೆ ಸಮರ್ಥನೆ ನೀಡಿದೆ.