
ಭೋಪಾಲ್: ತಮ್ಮ ಪಕ್ಷದ ಶಾಸಕರ ಕೈಯಿಂದ ಶೂಲೇಸ್ ಕಟ್ಟಿಸಿಕೊಂಡು ಮಧ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ವಿವಾದಕ್ಕೆ ಕಾರಣರಾಗಿದ್ದಾರೆ.
ಮಧ್ಯ ಪ್ರದೇಶದ ಸಿಯೋನಿಯಲ್ಲಿ ಶಾಸಕ ರಜನೀಶ್ ಸಿಂಗ್ ಕಮಲ್ ನಾಥ್ ಅವರ ಶೂಲೇಸ್ ಕಟ್ಟುತ್ತಿರುವ ವಿಡಿಯೊ ವೈರಲ್ ಆಗಿದೆ.
ಹಿಮಾಚಲ ಪ್ರದೇಶ ಮಾಜಿ ರಾಜ್ಯಪಾಲ ಮತ್ತು ಕಾಂಗ್ರೆಸ್ ನಾಯಕಿ ಊರ್ಮಿಳಾ ಸಿಂಗ್ ಅವರಿಗೆ ಗೌರವ ನಮನ ಸಲ್ಲಿಸಿದ ನಂತರ ಕಮಲ್ ನಾಥ್ ಅವರ ಶೂ ಲೇಸ್ ನ್ನು ಶಾಸಕ ರಜನೀಶ್ ಸಿಂಗ್ ಕಟ್ಟುತ್ತಿರುವ ದೃಶ್ಯ ಆನ್ ಲೈನ್ ನಲ್ಲಿ ವೈರಲ್ ಆಗಿತ್ತು. ಆದರೆ ಕಾಂಗ್ರೆಸ್ ನ ರಾಜ್ಯಾಧ್ಯಕ್ಷರಾಗಿರುವ ಕಮಲ್ ನಾಥ್ ಅವರಿಗೆ ನಾನು ತೋರಿಸಿದ ಗೌರವವಾಗಿದೆ ಹೊರತು ಅದರಲ್ಲಿ ಮತ್ತೇನೂ ಇಲ್ಲ, ವಿಶೇಷ ಅರ್ಥ ಕಲ್ಪಿಸಬೇಕಾದ ಅಗತ್ಯವಿಲ್ಲ ಎಂದು ಸ್ವತಃ ಶಾಸಕ ರಜನೀಶ್ ಸಿಂಗ್ ಹೇಳಿದ್ದಾರೆ.
ಅವರು ನನಗೆ ತಂದೆಗೆ ಸಮಾನ, ಅವರನ್ನು ತುಂಬಾ ಗೌರವಿಸುತ್ತೇನೆ. ನನ್ನ ಶಾಲಾ ದಿನಗಳಿಂದ ಅವರ ಆಶೀರ್ವಾದ ಪಡೆಯಲು ಅವರ ಕಾಲಿಗೆ ಬೀಳುತ್ತೇನೆ. ಅವರು ನನ್ನ ಕುಟುಂಬಕ್ಕೆ ತುಂಬಾ ಹತ್ತಿರ, ಅದರಲ್ಲೂ ವಿಶೇಷವಾಗಿ ನನ್ನ ತಂದೆಗೆ ಎಂದು ರಜನೀಶ್ ಸಿಂಗ್ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಅನೇಕ ಮಂದಿ ಸೇರಿದ್ದರು. ಅವರ ಶೂ ಹುಡುಕಲು ಕಷ್ಟವಾಯಿತು. ಆಗ ನಾನು ಹುಡುಕಿ ತಂದು ಅವರ ಕಾಲಿಗೆ ಹಾಕಿದೆ. ಮಾಧ್ಯಮದವರು ಇದನ್ನು ವೈಭವೀಕರಿಸುತ್ತಿದ್ದಾರೆ ಎಂದು ಆರೋಪಿಸಿದರು.
Advertisement