ಟ್ವಿಟರ್ ನಲ್ಲಿ ಸಚಿವೆ ಸುಷ್ಮಾ ವಿರುದ್ಧ ಟ್ರೋಲ್: ಬಿಜೆಪಿ ಮೌನದ ಹಿಂದಿನ ಮರ್ಮವೇನು?

ಪಾಸ್‌ಪೋರ್ಟ್‌ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡಲಾಗಿತ್ತು. ಈ ಘಟನೆ ಈಗ ರಾಜಕೀಯವಾಗಿ ಮಹತ್ವದ ಚರ್ಚೆಗೆ ಕಾರಣವಾಗಿದೆ.
ಸಚಿವೆ ಸುಷ್ಮಾ
ಸಚಿವೆ ಸುಷ್ಮಾ
ನವದೆಹಲಿ: ಲಖನೌದಲ್ಲಿ ಅಂತರ್‌ ಧರ್ಮೀಯ ದಂಪತಿಗೆ ಕಿರುಕುಳ ನೀಡಿದ್ದ ಪಾಸ್‌ಪೋರ್ಟ್‌ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡಲಾಗಿತ್ತು. ಈ ಘಟನೆ ಈಗ ರಾಜಕೀಯವಾಗಿ ಮಹತ್ವದ ಚರ್ಚೆಗೆ ಕಾರಣವಾಗಿದೆ. 
ಮುಸ್ಲಿಂ ಸಮುದಾಯದ ಪರ ನಿಂತಿದ್ದೀರಿ, ಸುಷ್ಮಾ ಸ್ವರಾಜ್  ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಪಾಸ್ಪೋರ್ಟ್ ಅಧಿಕಾರಿಯ ವಿರುದ್ಧ ಕೈಗೊಂಡ ಕ್ರಮ  "ಇಸ್ಲಾಮಿಕ್‌ ಕಿಡ್ನಿ ಪಡೆದಿದ್ದರ ಫ‌ಲ" ಎಂದೆಲ್ಲಾ ಸುಷ್ಮಾ ಸ್ವರಾಜ್ ಅವರನ್ನು ಟ್ವಿಟರ್ ನಲ್ಲಿ ಟ್ರೋಲ್ ಮಾಡಲಾಗಿತ್ತು. ಆದರೆ ತನ್ನದೇ ಸರ್ಕಾರದ ಸಚಿವೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಇಷ್ಟೆಲ್ಲಾ ಟ್ರೋಲ್ ಆಗುತ್ತಿದ್ದರೂ ಆಡಳಿತಾರೂಢ ಪಕ್ಷ ಬಿಜೆಪಿ ಮಾತ್ರ ಮೌನ ವಹಿಸಿದೆ. "ಈ ಘಟನೆ ಸಂಪೂರ್ಣವಾಗಿ ವಿದೇಶಾಂಗ ಇಲಾಖೆಗೆ ಸಂಬಂಧಪಟ್ಟಿರುವುದು" ಎಂದು ಬಿಜೆಪಿ ನಾಯಕರು ಅಧಿಕೃತ ಹೇಳಿಕೆ ನೀಡಿ ಸುಮ್ಮನಾಗಿದ್ದರೂ ಬಿಜೆಪಿಯ ಮೌನ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸೂಚಿಸುತ್ತಿದೆ. ಅಷ್ಟೇ ಅಲ್ಲದೇ, ಅಹ್ಮದಾಬಾದ್ ನ ಸಹಕಾರಿ ಬ್ಯಾಂಕ್ 745 ಕೋಟಿ ರೂ ಮೊತ್ತದ ಹಳೆಯ ನೋಟುಗಳನ್ನು ಸ್ವೀಕರಿಸಿದ್ದ ಪ್ರಕರಣದಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಸಮಾರ್ಥಿಸಿಕೊಳ್ಳುವ ಉತ್ಸಾಹವನ್ನು ಸುಷ್ಮಾ ಸ್ವರಾಜ್ ಪ್ರಕರಣದಲ್ಲಿ ಪಕ್ಷದ ಯಾರೊಬ್ಬ ನಾಯಕರೂ ತೋರಲಿಲ್ಲ. 
ವಿದೇಶಾಂಗ ಇಲಾಖೆಯಿಂದ ಕ್ರಮ ಎದುರಿಸಿದ್ದ ಅಧಿಕಾರಿ ವಿಕಾಸ್ ಮಿಶ್ರಾ ಆರೋಪ ಕೇಳಿಬರುತ್ತಿದ್ದಂತೆಯೇ ಪತ್ರಿಕಾಗೋಷ್ಠಿ ನಡೆಸಿ ತಾವು ತಮ್ಮ ಕೆಲಸವನ್ನಷ್ಟೇ ಮಾಡಿದ್ದಾಗಿ ಸ್ಪಷ್ಟನೆ ನೀಡಿದ್ದರು. ಈ ಬೆಳವಣಿಗೆಯ ನಂತರ ಸುಷ್ಮಾ ಸ್ವರಾಜ್ ಮುಸ್ಲಿಮರ ತುಷ್ಟೀಕರಣ ಮಾಡುತ್ತಿದ್ದಾರೆ ಎಂದು ಟ್ವಿಟಿಗರು ಟ್ರೋಲ್ ಮಾಡುತ್ತಿದ್ದರು, ಸ್ವತಃ ಸುಷ್ಮಾ ಸ್ವರಾಜ್ ಅವರೇ ಈ ವಿಷಯವನ್ನು ಬಹಿರಂಗಪಡಿಸಿದ್ದರು.  
ಇದೇ ವೇಳೆ ಸುಷ್ಮಾ ಸ್ವರಾಜ್ ಅವರಿಗೆ ತಮ್ಮದೇ ಪಕ್ಷದಿಂದ ಬೆಂಬಲ ಸಿಗದೇ ಇದ್ದರೂ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಸುಷ್ಮಾ ಸ್ವರಾಜ್ ಬೆಂಬಲಕ್ಕೆ ಧಾವಿಸಿವೆ. ಸುಷ್ಮಾ ಸ್ವರಾಜ್ ಅವರನ್ನು ಟ್ರೋಲ್ ಮಾಡುತ್ತಿರುವವರು ಬಿಜೆಪಿ-ಆರ್ ಎಸ್ಎಸ್ ನಿಂದ ಹಣಪಡೆದು ಟ್ವೀಟ್ ಮಾಡುತ್ತಿರುವ ಟ್ರೋಲ್ ಬ್ರಿಗೇಡ್, ಆದ್ದರಿಂದಲೇ ಅಂತರ್ಧರ್ಮೀಯ ವಿವಾಹವನ್ನು ವಿರೋಧಿಸುತ್ತಿರುವುದು ಸ್ವಾಭಾವಿಕ ಸಂಗತಿ ಎಂದು ಕಾಂಗ್ರೆಸ್ ಹಾಗೂ ಸಿಪಿಐಎಂ ಟ್ವಿಟರ್ ನಲ್ಲಿಯೇ ತಿರುಗೇಟು ನೀಡಿದ್ದವು. ಅಷ್ಟೇ ಅಲ್ಲದೇ ಒಂದೋ ಟ್ರೋಲ್ ಬ್ರಿಗೇಡ್ ಮೇಲೆ ಬಿಜೆಪಿ ನಿಯಂತ್ರಣ ಕಳೆದುಕೊಂಡಿದೆ. ಅಥವಾ ಇದು  ಆಣತಿಯಂತೆಯೇ ನಡೆಯುತ್ತಿದೆ ಎಂದು ಸಿಪಿಐಎಂ ನ ಕೇಂದ್ರ ಸಮಿತಿ ಸದಸ್ಯ ಮೊಹಮ್ಮದ್ ಸಲೀಂ ಹೇಳಿದ್ದರು. ಒಟ್ಟಾರೆ ಸುಷ್ಮಾ ಸ್ವರಾಜ್ ರನ್ನು ಟ್ರೋಲ್ ಮಾಡುತ್ತಿದ್ದರೂ ಅವರನ್ನು ಸಮರ್ಥಿಸಿಕೊಳ್ಳುವುದರಲ್ಲಿ ಹೆಚ್ಚಿನ ಉತ್ಸಾಹ ತೋರದ ಬಿಜೆಪಿ ಮೌನ ಹೆಚ್ಚು ಕುತೂಹಲ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com